ನೊಯ್ಡಾ | ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ: 9ನೇ ತರಗತಿ ವಿದ್ಯಾರ್ಥಿಯ ಬಂಧನ

ನೊಯ್ಡಾ: ನೊಯ್ಡಾದಲ್ಲಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಕಳಿಸಿದ ಆರೋಪದ ಮೇಲೆ 15 ವರ್ಷದ 9ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ನಂತರ, ಆತನನ್ನು ಬಾಲಾಪರಾಧ ನ್ಯಾಯಾಲಯದೆದುರು ಹಾಜರಪಡಿಸಲಾಯಿತು ಎಂದು ಓರ್ವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಶಾಲೆಗೆ ಹಾಜರಾಗಲು ಇಷ್ಟವಿಲ್ಲದೆ ಇದ್ದುದರಿಂದ ವಿದ್ಯಾರ್ಥಿಯು ಬಾಂಬ್ ಬೆದರಿಕೆ ಇಮೇಲ್ ಕಳಿಸಿದ್ದು, ತನ್ನ ಸ್ಥಳ ಹಾಗೂ ಐಪಿ ವಿಳಾಸ ಪತ್ತೆಯಾಗದಿರಲೆಂದು ಆತ ವಿಪಿಎನ್ ಬಳಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನೊಯ್ಡಾದ ಉಪ ಪೊಲೀಸ್ ಆಯುಕ್ತ ರಾಮ್ ಬಂದನ್ ಸಿಂಗ್, “ಶಾಲಾ ಆಡಳಿತ ಮಂಡಳಿಗಳು ಇಮೇಲ್ ಅನ್ನು ಪತ್ತೆ ಹಚ್ಚಿದ ನಂತರ, ಶಾಲೆಗಳಿಗೆ ಒಂದು ಪೊಲೀಸ್ ತಂಡ, ಒಂದು ಅಗ್ನಿಶಾಮಕ ದಳ ತಂಡ ಹಾಗೂ ಒಂದು ಬಾಂಬ್ ನಿಷ್ಕ್ರಿಯ ತಂಡವನ್ನು ಕಳಿಸಿಕೊಡಲಾಯಿತು. ಮೊದಲು ಶಾಲೆಯ ಆವರಣವನ್ನು ತೆರವುಗೊಳಿಸಿ, ನಂತರ ತೀವ್ರ ಶೋಧ ನಡೆಸಲಾಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬರಲಿಲ್ಲ” ಎಂದು ತಿಳಿಸಿದ್ದಾರೆ.