ಲಂಚ ಪ್ರಕರಣ: ಚುನಾವಣಾ ಬಾಂಡ್‌ಗಳ 2ನೇ ಅತಿದೊಡ್ಡ ಖರೀದಿದಾರ ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಎಫ್‌ಐಆರ್
ಹೊಸದಿಲ್ಲಿ: ಸಿಬಿಐ ಲಂಚ ಪ್ರಕರಣವೊಂದರಲ್ಲಿ ಚುನಾವಣಾ ಬಾಂಡ್‌ಗಳ 2ನೇ ಅತ್ಯಂತ ದೊಡ್ಡ ಖರೀದಿದಾರ, ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಕಂಪನಿಯು 966 ಕೋಟಿ ರೂ.ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತ್ತು.
ಜಗದಾಲಪುರ ಉಕ್ಕು ಸ್ಥಾವರ (ಎನ್‌ಐಎಸ್‌ಪಿ)ಕ್ಕೆ ಸಂಬಂಧಿಸಿದ ಕಾಮಗಾರಿಗಳ 174 ಕೋಟಿ ರೂ.ಬಿಲ್‌ಗಳ ಪಾವತಿಗಾಗಿ ಮೇಘಾ ಇಂಜನಿಯರಿಂಗ್‌ನಿಂದ 78 ಲಕ್ಷ ರೂ.ಗಳ ಲಂಚನ್ನು ಪಡೆದಿದ್ದ ಆರೋಪದಲ್ಲಿ ಎನ್‌ಐಎಸ್‌ಪಿ ಮತ್ತು ಎನ್‌ಎಂಡಿಸಿಯ ಎಂಟು ಮತ್ತು ಮೆಕಾನ್‌ನ ಇಬ್ಬರು ಅಧಿಕಾರಿಗಳನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಚುನಾವಣಾ ಆಯೋಗವು ಮಾ.21ರಂದು ಬಿಡುಗಡೆಗೊಳಿಸಿದ್ದ ದತ್ತಾಂಶಗಳಂತೆ ಚುನಾವಣಾ ಬಾಂಡ್‌ಗಳ 2ನೇ ಅತ್ಯಂತ ದೊಡ್ಡ ಖರೀದಿದಾರನಾಗಿರುವ ಮೇಘಾ ಇಂಜಿನಿಯರಿಂಗ್ ಬಿಜೆಪಿಗೆ ಸುಮಾರು 586 ಕೋಟಿ ರೂ.ಗಳ ದೇಣಿಗೆಯನ್ನು ನೀಡಿತ್ತು.
ಕಂಪನಿಯು ಬಿಆರ್‌ಎಸ್‌ಗೆ 195 ಕೋಟಿ ರೂ.,ಡಿಎಂಕೆಗೆ 85 ಕೋಟಿ ರೂ.,ವೈಎಸ್‌ಆರ್‌ಸಿಪಿಗೆ 37 ಕೋಟಿ ರೂ. ಮತ್ತು ಟಿಡಿಪಿಗೆ 25 ಕೋಟಿ ರೂ. ಮತ್ತು ಕಾಂಗ್ರೆಸ್‌ಗೆ 17 ಕೋಟಿ ರೂ. ದೇಣಿಗೆಗಳನ್ನು ನೀಡಿದ್ದರೆ, ಜೆಡಿಎಸ್, ಜನ ಸೇನಾ ಪಾರ್ಟಿ ಮತ್ತು ಜೆಡಿಯು 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗಿನ ಸಣ್ಣ ಮೊತ್ತಗಳನ್ನು ಸ್ವೀಕರಿಸಿದ್ದವು.
ಶನಿವಾರ ಬಹಿರಂಗಗೊಳಿಸಲಾದ ಎಫ್‌ಐಆರ್ ಪ್ರಕಾರ, ಜಗದಾಲಪುರ ಉಕ್ಕು ಸ್ಥಾವರದಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ 315 ಕೋಟಿ ರೂ.ಗಳ ಯೋಜನೆಯ ಗುತ್ತಿಗೆಯನ್ನು ಮೇಘಾ ಇಂಜಿನಿಯರಿಂಗ್ ಪಡೆದುಕೊಂಡಿತ್ತು ಮತ್ತು ಇದರಲ್ಲಿ ಲಂಚದ ಆರೋಪಗಳ ಕುರಿತು ಸಿಬಿಐ 2023, ಆ.10ರಂದು ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿಕೊಂಡಿತ್ತು.
ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದ ಅಂಶಗಳ ಆಧಾರದಲ್ಲಿ ಮಾ.31ರಂದು ಲಂಚದ ಆರೋಪದಲ್ಲಿ ನಿಯಮಿತ ಪ್ರಕರಣವು ದಾಖಲಾಗಿತ್ತು.
ಎನ್‌ಐಎಸ್‌ಪಿ ಮತ್ತು ಎನ್‌ಎಂಡಿಸಿಯ ಎಂಟು ಅಧಿಕಾರಿಗಳು 73.85 ಲಕ್ಷ ರೂ. ಲಂಚವನ್ನು ಮತ್ತು ಮೆಕಾನ್ ಲಿಮಿಟೆಡ್‌ನ ಇಬ್ಬರು ಅಧಿಕಾರಿಗಳು 5.01 ಲಕ್ಷ ರೂ.ಗಳ ಲಂಚವನ್ನು ಪಡೆದುಕೊಂಡಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.
ಮೇಘಾ ಇಂಜಿನಿಯರಿಂಗ್ ಮತ್ತು ಅದರ ಜನರಲ್ ಮ್ಯಾನೇಜರ್ ಸುಭಾಷ್ ಚಂದ್ರ ಸಂಗ್ರಾಸ್ ಅವರೂ ಆರೋಪಿಗಳಾಗಿದ್ದಾರೆ.