ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ಜಾಮೀನು ಮಂಜೂರುಗೊಳಿಸಿದ ದಿಲ್ಲಿ ಕೋರ್ಟ್
ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್‌ನ ನಿರ್ಗಮನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ದಿಲ್ಲಿಯ ನ್ಯಾಯಾಲಯ ಇಂದು ಜಾಮೀನು ಮಂಜೂರುಗೊಳಿಸಿದೆ.
ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್‌ನ ನಿರ್ಗಮನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ದಿಲ್ಲಿಯ ನ್ಯಾಯಾಲಯ ಇಂದು ಜಾಮೀನು ಮಂಜೂರುಗೊಳಿಸಿದೆ.
ಅವರ ಜಾಮೀನು ಅರ್ಜಿಯನ್ನು ದಿಲ್ಲಿ ಪೊಲೀಸರು ಬೆಂಬಲಿಸುವುದೂ ಇಲ್ಲ ವಿರೋಧಿಸುವುದೂ ಇಲ್ಲ ಎಂಬುದನ್ನು ವಿಚಾರಣೆ ವೇಳೆ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.
“ನಾವು ಜಾಮೀನು ಅರ್ಜಿಯನ್ನು ಸಾರಾಸಗಟಾಗಿ ವಿರೋದಿಸುವುದೂ ಇಲ್ಲ, ಅದನ್ನು ಬೆಂಬಲಿಸುವುದೂ ಇಲ್ಲ, ಅದನ್ನು ಕೋರ್ಟ್ ವಿವೇಚನೆಗೆ ಬಿಟ್ಟಿದ್ದೇವೆ,” ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಮಂಗಳವಾರ ನ್ಯಾಯಾಲಯವು ಬ್ರಿಜ್ ಭೂಷಣ್ ಸಿಂಗ್ ಮತ್ತು ಅಮಾನತುಗೊಂಡಿರುವ ಫೆಡರೇಶನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರಿಗೆ ಗುರುವಾರ ತನಕ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಇಂದು ಇಬ್ಬರಿಗೂ ನಿಯಮಿತ ಜಾಮೀನು ಮಂಜೂರುಗೊಳಿಸಲಾಗಿದೆ.
ಸಿಂಗ್ ಬಂಧನ ಕೋರಿ ಖ್ಯಾತನಾಮ ಕುಸ್ತಿಪಟುಗಳಾದ ಬಜರಂಗ್ ಪುಣಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಆದರೆ ತಮ್ಮ ವಿರುದ್ಧದ ಆರೋಪವನ್ನು ಸಿಂಗ್ ನಿರಾಕರಿಸುತ್ತಲೇ ಬಂದಿದ್ದಾರೆ.