CAA: ಪೌರತ್ವ ಕೋರಿ ಸಲ್ಲಿಸಲಾಗುವ ಅರ್ಜಿಗಳ ಪರಿಶೀಲನೆಗೆ ಜಿಲ್ಲಾ ಮಟ್ಟದ ಸಮಿತಿಗಳ ರಚನೆಗೆ ಗಜೆಟ್‌ ಅಧಿಸೂಚನೆ

Update: 2024-03-12 08:02 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ನಿಯಮಾವಳಿಗಳ ಕುರಿತು ಸೋಮವಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೆ ಇದರ ಜೊತೆಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೆಶಗಳಲ್ಲಿ ಪೌರತ್ವ ನೀಡಲು ಉನ್ನತಾಧಿಕಾರ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ರಚನೆಗೂ ಗಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ.

ಪೌರತ್ವ ಕಾಯಿದೆ 1954 ಇದರ ಸೆಕ್ಷನ್‌ 6ಬಿ ಅಡಿಯಲ್ಲಿನ ಅಧಿಕಾರಗಳನ್ನು ಬಳಸಿ ಗಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಸೂಚನೆ ಪ್ರಕಾರ ಸೆಕ್ಷನ್‌ 6ಬಿ ಅಡಿಯಲ್ಲಿ ಪೌರತ್ವಕ್ಕಾಗಿ ಆನ್‌ಲೈನ್‌ ಅರ್ಜಿಗಳು ಲಭ್ಯವಾಗಲಿವೆ. ಉನ್ನತಾಧಿಕಾರ ಸಮಿತಿಯು ಈ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಗಳ ಮುಖಾಂತರ ಪರಿಶೀಲಿಸಲಿದೆ. ಉನ್ನತಾಧಿಕಾರ ಸಮಿತಿಯ ನೇತೃತ್ವವನ್ನು ಗಣತಿ ಕಾರ್ಯಾಚರಣೆಯ ನಿರ್ದೇಶಕರು ವಹಿಸಿಕೊಳ್ಳಲಿದ್ದಾರೆ. ಈ ಸಮಿತಿಯಲ್ಲಿ ಗುಪ್ತಚರ ಬ್ಯುರೋ, ವಿದೇಶಿಗರ ಪ್ರಾದೇಶಿಕ ನೋಂದಣಿ ಅಧಿಕಾರಿ, ರಾಜ್ಯ ಇನ್ಫಾರ್ಮ್ಯಾಟಿಕ್ಸ್‌ ಅಧಿಕಾರಿ, ಪೋಸ್ಟ್‌ ಮಾಸ್ಟರ್‌ ಜನರಲ್‌ ಸದಸ್ಯರಾಗಿರಲಿದ್ದಾರೆ. ಗೃಹ ಇಲಾಖೆಯ ಪ್ರತಿನಿಧಿ ಮತ್ತು ವಿಭಾಗೀಯ ರೈಲ್ವೆ ಪ್ರಬಂಧಕರು ಈ ಸಮಿತಿಯ ಆಹ್ವಾನಿತ ಸದಸ್ಯರಾಗಲಿದ್ದಾರೆ.

ಹಿರಿಯ ಅಂಚೆ ಅಧೀಕ್ಷಕರು ಜಿಲ್ಲಾ ಮಟ್ಟದ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಸಮಿತಿ ಪರಿಶೀಲಿಸಲಿದೆ. ನಂತರ ನಿಯೋಜಿತ ಅಧಿಕಾರಿಯು ಅರ್ಜಿದಾರನಿಗೆ ಪೌರತ್ವ ಕಾಯಿದೆ 1955 ಇದರ ಎರಡನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ಪ್ರಮಾಣವಚನ ಬೋಧಿಸಲಿದ್ದಾರೆ.

ಈ ಪ್ರಕ್ರಿಯೆಯ ನಂತರ ಉನ್ನತಾಧಿಕಾರ ಸಮಿತಿ ಸೂಕ್ತ ಪರಾಮರ್ಶೆ ನಡೆಸಲಿದೆ ಮತ್ತು ಭದ್ರತಾ ಏಜನ್ಸಿಯಿಂದ ವರದಿ ಪಡೆದುಕೊಳ್ಳಲಿದೆ. ಅರ್ಜಿದಾರ ಪೌರತ್ವ ಪಡೆಯಲು ಅರ್ಹ ಎಂದು ಸಮಿತಿ ನಿರ್ಧರಿಸಿದರೆ ಸಮಿತಿಯ ಅಧ್ಯಕ್ಷರ ಡಿಜಿಟಲ್‌ ಸಹಿ ಇರುವ ಪ್ರಮಾಣಪತ್ರವನ್ನು ನೀಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News