ಪಾನ್ ಕಾರ್ಡ್ 2.0 ಯೋಜನೆಗೆ ಸಂಪುಟ ಅನುಮೋದನೆ; ಪಾನ್ ಕಾರ್ಡ್ ನಲ್ಲೂ ಇರಲಿದೆ QR ಕೋಡ್!
ಹೊಸದಿಲ್ಲಿ: ಪಾನ್ ಕಾರ್ಡ್ 2.0 ಯೋಜನೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದ್ದು, PAN ಕಾರ್ಡ್ ಗಳು ಹೆಚ್ಚಿನ ಕಾರ್ಯಶೀಲತೆ ಮತ್ತು ಭದ್ರತೆಗಾಗಿ QR ಕೋಡ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಪಾನ್ ಕಾರ್ಡ್ 2.0 ಯೋಜನೆಯಿಂದ ಅಸ್ತಿತ್ವದಲ್ಲಿರುವ PAN ವ್ಯವಸ್ಥೆಯಲ್ಲಿ ಗಮನಾರ್ಹವಾಗಿ ಅಪ್ಗ್ರೇಡ್ ಆಗಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತ್ವರಿತ ಸೇವೆಗಳನ್ನು ಒದಗಿಸುವ ಜೊತೆಗೆ ಗುಣಮಟ್ಟವೂ ಸುಧಾರಿಸಲಿದೆ ಎಂದು ಹೇಳಲಾಗಿದೆ.
PAN 2.0 ಪ್ರಸ್ತುತ PAN ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿದೆ. PAN ನೋಂದಣಿಯನ್ನು ಸುಲಭಗೊಳಿಸಲು ಮತ್ತು ತೆರಿಗೆದಾರರಿಗೆ ಸಹಾಯ ಮಾಡುವ ದೃಷ್ಠಿಯಿಂದ ಇದನ್ನು ರೂಪಿಸಲಾಗುತ್ತಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂ. ವ್ಯಯಿಸಲಿದೆ.
ಹೊಸ ಪಾನ್ ಕಾರ್ಡ್ ಗಳು QR ಕೋಡ್ ಅನ್ನು ಒಳಗೊಂಡಿರಲಿದೆ. ಪ್ಯಾನ್ ಕಾರ್ಡ ಅನ್ನು ಆನ್ ಲೈನ್ ಮೂಲಕ ಅಪ್ ಗ್ರೇಡ್ ಮಾಡಬಹುದಾಗಿದೆ. ಪ್ಯಾನ್ 2.0ಗೆ ಯಾವುದೇ ಶುಲ್ಕ ಇರುವುದಿಲ್ಲ. ಹೊಸ ಪ್ಯಾನ್ ನಲ್ಲಿ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ ಎಂದು ಹೇಳಲಾಗಿದೆ.