ಉತ್ತರ ಪ್ರದೇಶ: ಕುಸಿದು ಬಿದ್ದ 175 ವರ್ಷ ಹಳೆಯ ಗಂಗಾ ಸೇತುವೆ

Update: 2024-11-26 10:06 GMT

PC : timesofindia.indiatimes.com

ಲಕ್ನೊ: ನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಬ್ರಿಟಿಷರ ಕಾಲದ ಸಂಚಾರಿ ಸೇತುವೆಯೊಂದು ಸೋಮವಾರ ರಾತ್ರಿ ಉನ್ನಾಂವ್ ನ ಶುಕ್ಲಗಂಜ್ ಪ್ರದೇಶದಲ್ಲಿ ಗಂಗಾ ನದಿಗೆ ಕುಸಿದು ಬಿದ್ದಿದೆ. ಕಾನ್ಪುರ ಮತ್ತು ಉನ್ನಾಂವ್ ಜಿಲ್ಲೆಗಳ ನಡುವೆ ಇದ್ದ ಈ ಸೇತುವೆಯು ಈ ಪ್ರದೇಶದ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.

ಈ ಸೇತುವೆಯನ್ನು 1874ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಔಧ್ ಮತ್ತು ರೋಹಿಲ್ ಖಂಡ್ ಲಿಮಿಟೆಡ್ ಕಂಪನಿ ನಿರ್ಮಿಸಿತ್ತು. ಈ ಸೇತುವೆಯು ಸುಮಾರು 150 ವರ್ಷಗಳ ಕಾಲ ಬಾಳಿಕೆ ಬಂದಿತ್ತು.

2021ರಲ್ಲಿ ಈ ಸೇತುವೆಯ ಕಾನ್ಪುರ ಬದಿಯಲ್ಲಿ ಗಮನಾರ್ಹ ಬಿರುಕುಗಳು ಕಂಡು ಬಂದಿದ್ದವು. ನಿರ್ದಿಷ್ಟವಾಗಿ 2, 10, 17 ಹಾಗೂ 12 ಸ್ತಂಭಗಳಲ್ಲಿ ಗಂಭೀರ ಸ್ವರೂಪದ ಬಿರುಕುಗಳು ಕಂಡು ಬಂದಿದ್ದರಿಂದ, ಈ ಸೇತುವೆಯನ್ನು ಸಂಚಾರಕ್ಕೆ ಮುಚ್ಚುವುದು ಅನಿವಾರ್ಯವಾಯಿತು. ಈ ಸೇತುವೆಗೆ ಪ್ರವೇಶವನ್ನು ನಿರ್ಬಂಧಿಸಲು ಸೇತುವೆಯ ಎರಡೂ ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು.

ಈ ಸೇತುವೆಯನ್ನು ಎಪ್ರಿಲ್ 15, 2021ರ ಮಧ್ಯರಾತ್ರಿಯಿಂದ ಅಧಿಕೃತವಾಗಿ ಮುಚ್ಚಲಾಗಿತ್ತು. ಈ ಸೇತುವೆಯನ್ನು ಮತ್ತೆ ತೆರೆಯಲು, ಮರುನಿರ್ಮಾಣ ಮಾಡಲು ದಿಲ್ಲಿಯ ವೈಜ್ಞಾನಿಕ ತಂಡವೊಂದು ರೂ. 29.50 ಕೋಟಿ ವೆಚ್ಚವನ್ನು ಅಂದಾಜಿಸಿತ್ತು. ಆದರೆ, ಸ್ಥಳೀಯ ಆಡಳಿತವು ಈ ಸೇತುವೆಯನ್ನು ಮುಚ್ಚುವ ನಿರ್ಧಾರ ಕೈಗೊಂಡಿತ್ತು.

ಸೋಮವಾರ-ಮಂಗಳವಾರ ಮಧ್ಯರಾತ್ರಿಯಲ್ಲಿ ಸೇತುವೆಯ ಭಾಗಗಳು ಗಂಗಾ ನದಿಗೆ ಕುಸಿದು ಬಿದ್ದಿವೆ. ದಾರಿಹೋಕರು ಇದನ್ನು ಚಿತ್ರೀಕರಿಸಿಕೊಂಡಿದ್ದು, ಇದರ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಸದ್ಯ ಜಿಲ್ಲಾಡಳಿತವು ಸೇತುವೆ ಕೆಳಗೆ ಹಾದು ಹೋಗುವ ದೋಣಿಗಳು ಹಾಗೂ ಸ್ನಾನ ಮಾಡಿಕೊಳ್ಳುವವರ ಸುರಕ್ಷತೆಯ ದೃಷ್ಟಿಯಿಂದ ಕುಸಿತಗೊಂಡ ಸೇತುವೆಯ ಭಾಗವನ್ನು ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದೇ ವೇಳೆ, ಸೇತುವೆಯ ಸುಭದ್ರ ಭಾಗವನ್ನು ಸಂರಕ್ಷಿಸುವ ಉದ್ದೇಶವನ್ನು ಪ್ರಾಧಿಕಾರಗಳು ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News