ʼಎಸ್ಸಿ, ಎಸ್ಟಿ, ಒಬಿಸಿಗಳ ಹಾದಿಯಲ್ಲಿನ ʼಗೋಡೆʼಯನ್ನು ಮೋದಿ ಬಲಪಡಿಸುತ್ತಿದ್ದಾರೆʼ: ರಾಹುಲ್ ಗಾಂಧಿ
ಹೊಸದಿಲ್ಲಿ: ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಹಾದಿಯಲ್ಲಿನ ಗೋಡೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಬಲಪಡಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, UPA ಅವಧಿಯಲ್ಲಿ ಆ ಗೋಡೆಯನ್ನು ದುರ್ಬಲಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
'ಸಂವಿಧಾನ ರಕ್ಷಣ ಅಭಿಯಾನ'ವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಸಂವಿಧಾನ ದಿನದಂದು ನಡೆದ ಸಮಾರಂಭವನ್ನು ಉಲ್ಲೇಖಿಸಿ, ಮೋದಿ ಸಂವಿಧಾನವನ್ನು ಓದಿಲ್ಲ ಎಂಬುದು ಅವರ ಗ್ಯಾರಂಟಿ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಈ ಪುಸ್ತಕವನ್ನು ಓದುತ್ತಿದ್ದರೆ ಅವರು ಪ್ರತಿದಿನ ಏನು ಮಾಡುತ್ತಾರೆ, ಅವರು ಅದನ್ನು ಮಾಡುತ್ತಿರಲಿಲ್ಲ ಎಂದು ಭಾರತದ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ ಇಡೀ ವ್ಯವಸ್ಥೆಯು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದ ಜನರ ವಿರುದ್ಧವಾಗಿದೆ. ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಹಾದಿಗೆ ಅಡ್ಡಿಪಡಿಸುವ ಗೋಡೆಗೆ ಮೋದಿ, ಆರೆಸ್ಸೆಸ್ ಸಿಮೆಂಟ್ ಸೇರಿಸುವ ಮೂಲಕ ಬಲಪಡಿಸುತ್ತಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರ ನರೇಗಾ, ಭೂಸ್ವಾಧೀನ ಕಾಯ್ದೆ, ಆಹಾರದ ಹಕ್ಕನ್ನು ನೀಡಿದೆ ಎಂದು ಹೇಳಿದ್ದಾರೆ.
ನಾವು ಆ ಗೋಡೆಯನ್ನು ದುರ್ಬಲಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೆವು ಆದರೆ ಬಿಜೆಪಿ ಕಾಂಕ್ರೀಟ್ ಸೇರಿಸುವ ಮೂಲಕ ಆ ಗೋಡೆಯನ್ನು ಬಲಪಡಿಸಿದೆ. ತೆಲಂಗಾಣದಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿರುವುದು ಐತಿಹಾಸಿಕ ಹೆಜ್ಜೆಯಾಗಿದ್ದು, ಕಾಂಗ್ರೆಸ್ ಎಲ್ಲಿ ಅಧಿಕಾರಕ್ಕೆ ಬಂದರೂ ಅದನ್ನೇ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.