ಆಂಧ್ರ ಸಿಎಂ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಪ್ರಕರಣ : ತಲೆಮರೆಸಿಕೊಂಡ ರಾಮ್‌ಗೋಪಾಲ್ ವರ್ಮಾ?
ಹೈದರಾಬಾದ್: ಸಾಮಾಜಿಕ ಮಾಧ್ಯಮದಲ್ಲಿ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳು ಹಾಕಿರುವುದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಹುಡುಕುತ್ತಿರುವುದಾಗಿ ವರದಿಯಾಗಿದೆ.
ವರ್ಮಾ ಅವರು ಕೊಯಮತ್ತೂರಿನಲ್ಲಿ ಶೂಟಿಂಗ್ ನಲ್ಲಿದ್ದಾಗ ವರ್ಮಾ ಅವರ ಹೈದರಾಬಾದ್ ನಿವಾಸಕ್ಕೆ ಪೊಲೀಸ್ ತಂಡ ಭೇಟಿ ನೀಡಿತ್ತು. ಪ್ರಕರಣದ ಬಗ್ಗೆ ವಿಚಾರಣೆಗಾಗಿ ವರ್ಮಾ ಅವರು ಆನ್‌ಲೈನ್ ಮೂಲಕ ಪೊಲೀಸರ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ ಎಂದು ಅವರ ವಕೀಲರು ಹೇಳಿದ್ದು, “ಈ ಡಿಜಿಟಲ್ ಯುಗದಲ್ಲಿ, ಆನ್‌ಲೈನ್ ಮುಖಾಂತರವೂ ಪೊಲೀಸರು ವಿಚಾರಣೆ ನಡೆಸಬಹುದು”ಎಂದು ಅವರು ಹೇಳಿದ್ದಾರೆ.
ಸಿಎಂ ನಾಯ್ಡು ಮತ್ತು ಅವರ ಪುತ್ರನ ಅವಹೇಳನಕಾರಿಯಾಗಿ ಎಡಿಟ್ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನವೆಂಬರ್ 11 ರಂದು ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ನವೆಂಬರ್ 18 ರಂದು ಪ್ರಕರಣವನ್ನು ರದ್ದುಗೊಳಿಸುವಂತೆ ವರ್ಮಾ ಅವರು ಸಲ್ಲಿಸಿದ್ದ ಮನವಿಯನ್ನು ಆಂಧ್ರ ಹೈಕೋರ್ಟ್ ತಿರಸ್ಕರಿಸಿ, ಜಾಮೀನು ಅರ್ಜಿ ಸಲ್ಲಿಸುವಂತೆ ಕೇಳಿತು. ಜಾಮೀನು ಅರ್ಜಿ ಬಾಕಿ ಇರುವಂತೆಯೇ ನವೆಂಬರ್ 24 ರ ಮೊದಲು ವಿಚಾರಣೆಗಾಗಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಪೊಲೀಸರು ವರ್ಮಾಗೆ ಎರಡನೇ ನೋಟಿಸ್ ಜಾರಿ ಮಾಡಿದ್ದರು.