ಸುಪ್ರೀಂ ಕೋರ್ಟ್ ಯಾವ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒಂದು ಪಕ್ಷ ನಿರ್ಧರಿಸಬೇಕೆ? : ಉದ್ಧವ್ ಬಣದ ಆರೋಪದ ಕುರಿತು ನ್ಯಾ. ಚಂದ್ರಚೂಡ್ ಕಿಡಿ
ಹೊಸದಿಲ್ಲಿ: ತಮ್ಮ ವಿರುದ್ಧ ಶಿವಸೇನೆ (ಉದ್ಧವ್ ಬಣ) ಮಾಡಿರುವ ಆರೋಪದ ಕುರಿತು ಮೌನ ಮುರಿದಿರುವ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, “ಸುಪ್ರೀಂ ಕೋರ್ಟ್ ಯಾವ ಪ್ರಕರಣಗಳ ವಿಚಾರಣೆ ನಡೆಸಬೇಕು ಎಂದು ಒಂದು ಪಕ್ಷ ನಿರ್ಧರಿಸಬೇಕೆ?” ಎಂದು ಕಿಡಿ ಕಾರಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾದ ಬೆನ್ನಿಗೇ, “ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಹಾರಾಷ್ಟ್ರ ಶಾಸಕರ ಅನರ್ಹತೆ ಹಾಗೂ ಪಕ್ಷಾಂತರ ಪ್ರಕರಣದ ಕುರಿತ ವಿಚಾರಣೆಯನ್ನು ವಿಳಂಬಗೊಳಿಸಿದ್ದರಿಂದ ರಾಜ್ಯ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಸೋಲಾಗಿದೆ. ಅವರ ವಿಳಂಬ ಧೋರಣೆಯಿಂದ ರಾಜ್ಯ ರಾಜಕಾರಣಿಗಳಿಗೆ ಕಾನೂನಿನ ಭಯವಿಲ್ಲದಂತಾಯಿತು ಹಾಗೂ ಪಕ್ಷಾಂತರಕ್ಕೆ ಬಾಗಿಲು ತೆರೆಯಿತು” ಎಂದು ಶಿವಸೇನೆ (ಉದ್ಧವ್ ಠಾಕ್ರೆ) ನಾಯಕ ಸಂಜಯ್ ರಾವತ್ ಆರೋಪಿಸಿದ್ದರು. ಅಲ್ಲದೆ ಇತಿಹಾಸ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದೂ ವಾಗ್ದಾಳಿ ನಡೆಸಿದ್ದರು.
ಈ ಕುರಿತು ANI ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ಡಿ.ವೈ.ಚಂದ್ರಚೂಡ್, “ನನ್ನ ಉತ್ತರ ತುಂಬಾ ಸರಳ. ಇಡೀ ವರ್ಷ ನಾವು ಮೂಲ ಸಾಂವಿಧಾನಿಕ ಪ್ರಕರಣಗಳು, ಒಂಬತ್ತು ಸದಸ್ಯರ ನ್ಯಾಯಪೀಠದ ನಿರ್ಣಯಗಳು, ಏಳು ಸದಸ್ಯರ ನ್ಯಾಯಪೀಠದ ನಿರ್ಣಯಗಳು, ಐದು ಸದಸ್ಯರ ನ್ಯಾಯಪೀಠದ ನಿರ್ಣಯಗಳ ವಿಚಾರಣೆಯಲ್ಲಿ ಮುಳುಗಿದ್ದೆವು. ಈಗ, ಸುಪ್ರೀಂ ಕೋರ್ಟ್ ಯಾವ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒಂದು ಪಕ್ಷ ಅಥವಾ ಓರ್ವ ವ್ಯಕ್ತಿ ನಿರ್ಧರಿಸಬೇಕೆ? ಕ್ಷಮಿಸಿ, ಆ ಆಯ್ಕೆ ಇರುವುದು ಮುಖ್ಯ ನ್ಯಾಯಮೂರ್ತಿಗೆ ಮಾತ್ರ” ಎಂದು ತಿರುಗೇಟು ನೀಡಿದ್ದಾರೆ.
“ನಮಗೆ ಒಪ್ಪಿಸಲಾಗಿರುವ ಕೆಲಸದ ಸಮಯದಲ್ಲಿ ಒಂದು ನಿಮಿಷವೂ ನಾವು ಕೆಲಸ ಮಾಡಿಲ್ಲ ಎಂಬುದರತ್ತ ನೀವು ಬೊಟ್ಟು ಮಾಡಿ. ಅಂತಹ ಟೀಕೆಗೆ ಮಾನ್ಯತೆ ಇರುತ್ತದೆ. ಕಳೆದ 20 ವರ್ಷಗಳಿಂದ ಪ್ರಮುಖ ಸಾಂವಿಧಾನಿಕ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿದ್ದವು. ಈ ಇಪ್ಪತ್ತು ವರ್ಷಗಳ ಕಾಲ ಸುಪ್ರೀಂ ಕೋರ್ಟ್ ಏಕೆ ಈ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿಲ್ಲ ಹಾಗೂ ಇತ್ತೀಚಿನ ಪ್ರಕರಣಗಳ ವಿಚಾರಣೆಯಲ್ಲಿ ತೊಡಗಿಕೊಂಡಿತ್ತು? ನೀವೇನಾದರೂ ಹಳೆಯ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡರೆ, ನೀವೇಕೆ ನಿರ್ದಿಷ್ಟ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಳಸಲಾಗುತ್ತದೆ. ನಿಮ್ಮ ಬಳಿ ಸೀಮಿತ ಪ್ರಮಾಣದ ಮಾನವ ಸಂಪನ್ಮೂಲವಿದ್ದು, ಅದಕ್ಕೆ ಪೂರಕವಾಗಿ ನ್ಯಾಯಾಧೀಶರನ್ನು ಒದಗಿಸಿದಾಗ, ನೀವು ಸಮತೋಲನವನ್ನು ಸಾಧಿಸಬೇಕಾಗುತ್ತದೆ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
2022ರಲ್ಲಿ ಏಕನಾಥ್ ಶಿಂದೆ ಬಂಡಾಯದಿಂದ ಅವಿಭಜಿತ ಶಿವಸೇನೆ ವಿಭಜನೆಗೊಂಡು, ಉದ್ಧವ್ ಠಾಕ್ರೆ ನೇತೃತ್ವದ ಆಡಳಿತಾರೂಢ ಮಹಾವಿಕಾಸ್ ಅಘಾಡಿ ಸರಕಾರ ಪತನಗೊಂಡಿತ್ತು. ನಂತರ ಏಕನಾಥ್ ಶಿಂದೆ ನೇತೃತ್ವದ ಮಹಾಯುತಿ ಸರಕಾರ ರಚನೆಯಾಗಿತ್ತು. ಆಗ ಏಕನಾಥ್ ಶಿಂದೆಯೊಂದಿಗೆ ಪಕ್ಷಾಂತರ ಮಾಡಿದ್ದ ಶಾಸಕರ ಅನರ್ಹತೆ ಕೋರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಶಿಂದೆ ಬಣ ಕೂಡಾ ಪ್ರತಿ ಅರ್ಜಿ ದಾಖಲಿಸಿತ್ತು.
ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರತಿಸ್ಪರ್ಧಿ ಬಣಗಳ ಅನರ್ಹತೆ ಅರ್ಜಿಗಳ ಕುರಿತು ನಿರ್ಧರಿಸುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೂಚಿಸಿತ್ತು. ಈ ವರ್ಷದ ಜನವರಿ ತಿಂಗಳಲ್ಲಿ ಶಿಂದೆ ನೇತೃತ್ವದ ಬಣವನ್ನು ಅಧಿಕೃತ ಶಿವಸೇನೆ ಎಂದು ಸ್ಪೀಕರ್ ನಾರ್ವೇಕರ್ ಘೋಷಿಸಿದ್ದರು.
ನವೆಂಬರ್ 23ರಂದು ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಸ್ಪರ್ಧಿಸಿದ್ದ 94 ಕ್ಷೇತ್ರಗಳ ಪೈಕಿ ಕೇವಲ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಇನ್ನಿತರ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ತಾನು ಸ್ಪರ್ಧಿಸಿದ್ದ 101 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) ತಾನು ಸ್ಪರ್ಧಿಸಿದ್ದ 86 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದವು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಕಳಪೆ ಪ್ರದರ್ಶನ ತೋರಿದ್ದರಿಂದ, ಶಿವಸೇನೆ (ಉದ್ಧವ್ ಬಣ) ಈ ಫಲಿತಾಂಶಕ್ಕೆ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯನ್ನು ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವಿಳಂಬಗೊಳಿಸಿದ್ದೇ ಕಾರಣ ಎಂದು ಆರೋಪಿಸಿತ್ತು.