ಮಹಾರಾಷ್ಟ್ರ | ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಏಕನಾಥ್ ಶಿಂದೆ
ಮುಂಬೈ: ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ರೊಂದಿಗೆ ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಏಕನಾಥ್ ಶಿಂದೆ, ರಾಜ್ಯಪಾಲ ಸಿ.ಪಿ.ರಾಧಕೃಷ್ಣನ್ ಅವರಿಗೆ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತೀವ್ರ ವದಂತಿಗಳು ಹಬ್ಬಿರುವ ಬೆನ್ನಿಗೇ, ತಮ್ಮ ಪರವಾಗಿ ಮುಖ್ಯಮಂತ್ರಿ ಹುದ್ದೆಗೆ ವಕಾಲತು ವಹಿಸಲು ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದೆದುರು ಜಮಾಯಿಸದಂತೆ ತಮ್ಮ ಬೆಂಬಲಿಗರಿಗೆ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಏಕನಾಥ್ ಶಿಂದೆ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಶಿಂದೆ, “ಮಹಾಯುತಿ ಮೈತ್ರಿಕೂಟದ ಪ್ರಚಂಡ ಜಯಭೇರಿಯ ನಂತರ, ನಮ್ಮ ಸರಕಾರವು ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ನಾವು ಚುನಾವಣೆಯಲ್ಲಿ ಮಹಾ ಮೈತ್ರಿಕೂಟವಾಗಿ ಸ್ಪರ್ಧಿಸಿದ್ದೆವು ಹಾಗೂ ಇಂದಿಗೂ ಕೂಡಾ ಒಗ್ಗಟ್ಟಾಗಿದ್ದೇವೆ” ಎಂದು ಹೇಳಿದ್ದಾರೆ.
“ನನ್ನ ಪರವಾಗಿ ಮುಂಬೈನಲ್ಲಿ ನೆರೆಯುವಂತೆ ಕೆಲವರು ನೀಡಿರುವ ಕರೆ ಹಾಗೂ ಅವರು ತೋರಿರುವ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಭಾರಿ ಆಭಾರಿಯಾಗಿದ್ದೇನೆ. ಆದರೆ, ಈ ವಿಷಯದಲ್ಲಿ ನನ್ನ ಪರವಾಗಿ ಗುಂಪುಗೂಡುವುದರಿಂದ ದೂರ ಉಳಿಯಬೇಕು ಎಂದು ನಾನು ಎಲ್ಲರಲ್ಲೂ ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ” ಎಂದೂ ಬರೆದುಕೊಂಡಿದ್ದಾರೆ.