ಹದಿಹರೆಯದ ಹುಡುಗಿಯರಿಗೆ ಕಲಕತ್ತಾ ಹೈಕೋರ್ಟಿನ ಸಲಹೆ ಆಕ್ಷೇಪಾರ್ಹ ಮತ್ತು ಅನಗತ್ಯ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಲೈಂಗಿಕ ವರ್ತನೆಯ ಕುರಿತು ಹದಿಹರೆಯದ ಹುಡುಗಿಯರಿಗೆ ಸಲಹೆಯನ್ನು ಹೊರಡಿಸಿರುವ ಕಲಕತ್ತಾ ಉಚ್ಛ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ಶುಕ್ರವಾರ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಹೈಕೋರ್ಟಿನ ಅಭಿಪ್ರಾಯಗಳು ಅನಗತ್ಯವಾಗಿದ್ದವು ಎಂದು ಹೇಳಿತು.
ಉಚ್ಛ ನ್ಯಾಯಾಲಯದ ಸಲಹೆಯು ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಅನಗತ್ಯವಾಗಿದ್ದು, ಹದಿಹರೆಯದವರ ಹಕ್ಕುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದೆ ಎಂದು ನ್ಯಾಯಾಲಯವು ಟೀಕಿಸಿತು.
ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರು,ಕಲಕತ್ತಾ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ದಾಖಲಿಸಿರುವ ವ್ಯಾಪಕ ಅಭಿಪ್ರಾಯಗಳಿಂದಾಗಿ ಭಾರತದ ಮುಖ್ಯ ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಸ್ವಯಂಪ್ರೇರಿತ ಅರ್ಜಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮೇಲ್ನೋಟಕ್ಕೆ,ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅಥವಾ ಬೋಧಿಸುವುದು ಅನಪೇಕ್ಷಿತವಾಗಿದೆ. ತೀರ್ಪಿನಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಸಂವಿಧಾನದ 21ನೇ ವಿಧಿಯಡಿ ಹದಿಹರೆಯದವರ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.
ಇತ್ತೀಚಿಗೆ ಪೊಕ್ಸೊ ಪ್ರಕರಣವೊಂದರ ವಿಚಾರಣೆಯನ್ನು ನಡೆಸಿದ್ದ ಕಲಕತ್ತಾ ಉಚ್ಛ ನ್ಯಾಯಾಲಯವು, ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಕ್ಕಾಗಿ 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದ ಅಪ್ರಾಪ್ತ ವಯಸ್ಕ ಬಾಲಕನನ್ನು ಖುಲಾಸೆಗೊಳಿಸಿತ್ತು. ಹದಿಹರೆಯದ ಬಾಲಕರು ಮತ್ತು ಬಾಲಕಿಯರು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಬೇಕು ಎಂದೂ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸೂಚಿಸಿತ್ತು. ಬಾಲಕಿಯರಿಗೆ ನೀಡಿದ್ದ ತನ್ನ ಸಲಹೆಯಲ್ಲಿ ನ್ಯಾಯಾಲಯವು, ಎರಡು ನಿಮಿಷಗಳ ಲೈಂಗಿಕ ಸಂತೋಷಕ್ಕೆ ಬಾಲಕಿ ತನ್ನನ್ನು ಒಪ್ಪಿಸಿಕೊಂಡಾಗ ಆಕೆ ಸಮಾಜದ ದೃಷ್ಟಿಯಲ್ಲಿ ತನ್ನ ಘನತೆಯನ್ನು ಕಳೆದುಕೊಳ್ಳುತ್ತಾಳೆ, ಹೀಗಾಗಿ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದೂ ಹೇಳಿತ್ತು.
ಕಲಕತ್ತಾ ಉಚ್ಛ ನ್ಯಾಯಾಲಯದ ತಿರ್ಪನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಅದರ ಹಲವಾರು ಭಾಗಗಳು ಅತ್ಯಂತ ಆಕ್ಷೇಪಾರ್ಹವಾಗಿವೆ ಮತ್ತು ಸಂಪೂರ್ಣವಾಗಿ ಅನಗತ್ಯವಾಗಿವೆ ಎನ್ನುವುದು ಕಂಡುಬಂದಿದೆ. ಈ ಅಭಿಪ್ರಾಯಗಳು ಸಂವಿಧಾನದ ವಿಧಿ 21ರಡಿ ಕಿಶೋರ ವಯಸ್ಕರ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ನ್ಯಾಯವಾದಿ ಮಾಧವಿ ದಿವಾನ್ ಅವರನ್ನು ಅಮಿಕಸ್ ಕ್ಯೂರೆ ಆಗಿ ನೇಮಕಗೊಳಿಸಿದ ಸುಪ್ರೀಂ ಕೋರ್ಟ್,ಅವರಿಗೆ ನೆರವಾಗಲು ನ್ಯಾಯವಾದಿ ಲಿಝ್ ಮ್ಯಾಥ್ಯೂ ಅವರನ್ನು ನಿಯೋಜಿತು. ಪ.ಬಂಗಾಳ ರಾಜ್ಯ ಸರಕಾರ,ಆರೋಪಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸುಗಳನ್ನೂ ಹೊರಡಿಸಿದ ಅದು, ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವ ಉದ್ದೇಶವಿದೆಯೇ ಎನ್ನುವುದನ್ನು ತಿಳಿಸುವಂತೆ ಸರಕಾರಕ್ಕೆ ಸೂಚಿಸಿದೆ