35 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ನನಗಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದೇನೆ: ಪ್ರಿಯಾಂಕಾ ಗಾಂಧಿ

Update: 2024-10-23 08:27 GMT
ಪ್ರಿಯಾಂಕಾ ಗಾಂಧಿ (PTI)

ವಯನಾಡ್: ನಾನು 35 ವರ್ಷಗಳಿಂದ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುತ್ತಿದ್ದು, ಇದೇ ಪ್ರಥಮ ಬಾರಿ ನನಗಾಗಿ ಬೆಂಬಲ ಯಾಚಿಸುತ್ತಿದ್ದೇನೆ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು. ಈ ಸಂದರ್ಭದಲ್ಲಿ ಅವರ ತಾಯಿ ಸೋನಿಯಾ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ವೇದಿಕೆಯ ಮೇಲಿದ್ದರು.

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ, ವಯನಾಡ್ ನಲ್ಲಿ ಅವರು ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದರು.

ಇದೇ ಪ್ರಥಮ ಬಾರಿ ಚುನಾವಣಾ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ, “ನಾನು ನನ್ನ ತಂದೆಗಾಗಿ ಚುನಾವಣಾ ಪ್ರಚಾರ ನಡೆಸಿದಾಗ ನನಗೆ 17 ವರ್ಷ ವಯಸ್ಸಾಗಿತ್ತು. ಅದಾದ ನಂತರ ನಾನು ನನ್ನ ತಾಯಿ, ಸಹೋದರ ಹಾಗೂ ಸಹೋದ್ಯೋಗಿಗಳಿಗಾಗಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಕಳೆದ 35 ವರ್ಷಗಳಿಂದ ನಾನು ವಿವಿಧ ಚುನಾವಣೆಗಳಲ್ಲಿ ಪ್ರಚಾರ ನಡೆಸಿದ್ದು, ಇದೇ ಪ್ರಥಮ ಬಾರಿಗೆ ನನಗಾಗಿ ಬೆಂಬಲ ಕೋರುವ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ. ಇದು ವಿಭಿನ್ನ ಅನುಭವವಾಗಿದೆ” ಎಂದು ಹೇಳಿದರು.

ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಅವಕಾಶ ನೀಡಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸಿದ ಪ್ರಿಯಾಂಕಾ ಗಾಂಧಿ, “ನೀವು ನನಗೊಂದು ಅವಕಾಶ ನೀಡಿದರೆ, ನಿಮ್ಮ ಸೇವೆ ಮಾಡುವುದು ನನ್ನ ಪಾಲಿನ ಗೌರವವಾಗಲಿದೆ” ಎಂದು ವಯನಾಡ್ ಜನತೆಗೆ ಮನವಿ ಮಾಡಿದರು.

ಇದಕ್ಕೂ ಮುನ್ನ, ವಯನಾಡ್ ಲೋಕಸಭಾ ಕ್ಷೇತ್ರವನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿ ಹಾಗೂ ವಯನಾಡ್ ಕ್ಷೇತ್ರಗಳೆರಡರಿಂದಲೂ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದರು. ಇದೀಗ ವಯನಾಡ್ ಕ್ಷೇತ್ರವನ್ನು ತೊರೆದಿರುವ ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಗೆ ಆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ.

ನವೆಂಬರ್ 13ರಂದು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಪೈಕಿ ವಯನಾಡ್ ಲೋಕಸಭಾ ಕ್ಷೇತ್ರ ಕೂಡಾ ಸೇರಿದೆ. ನಾಂದೇಡ್ ಮತ್ತೊಂದು ಲೋಕಸಭಾ ಕ್ಷೇತ್ರವಾಗಿದೆ. ಇವುಗಳೊಂದಿಗೆ ವಿವಿಧ ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಝಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯೊಂದಿಗೆ ಈ ಎಲ್ಲ ಕ್ಷೇತ್ರಗಳ ಚುನಾವಣಾ ಫಲಿತಾಂಶವೂ ಪ್ರಕಟಗೊಳ್ಳಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News