ರಾತ್ರಿ ಹೊತ್ತಲ್ಲೂ ಪ್ರಚಾರ: ಮಲಗಿರುವ ಲಕ್ಷದ್ವೀಪದಲ್ಲಿ ಸಕ್ರಿಯಗೊಂಡ ರಾಜಕಾರಣ

Update: 2024-04-06 09:48 GMT

File image: PTI

ಲಕ್ಷದ್ವೀಪ: ಲಕ್ಷದ್ವೀಪ ಸಮೂಹದೊಂದಿಗೆ ಗೂಡು ಕಟ್ಟಿಕೊಂಡಿರುವ ಪ್ರಶಾಂತ ಅಗಟ್ಟಿ ದ್ವೀಪದಲ್ಲಿ ರಾತ್ರಿಯು ದೀರ್ಘವಾಗತೊಡಗಿದೆ. ಇಂತಹ ಕಡೆ ನಿಶ್ಯಬ್ದವನ್ನು ನಿರೀಕ್ಷಿಸುತ್ತಿರುವವರಿಗೆ ಅಚ್ಚರಿಯಾಗುವಂತೆ ಎನ್ಸಿಪಿ (ಶರದ್ ಪವಾರ್) ಸಂಸದ ಮುಹಮ್ಮದ್ ಫೈಸಲ್ ಪಿ.ಪಿ. ಪರವಾಗಿ ಪಕ್ಷದ ಕಾರ್ಯಕರ್ತರು ಅತ್ಯುತ್ಸಾಹದಿಂದ ಪ್ರಚಾರ ಮಾಡುತ್ತಾ, ದ್ವೀಪದ ಬೀದಿಗಳಿಗೆ ರಂಗು ತುಂಬುತ್ತಿದ್ದಾರೆ.

ಇವಿಎಂ ಮಾದರಿಯನ್ನು ಹೊತ್ತುಕೊಂಡು ರಾತ್ರಿ ಪ್ರಚಾರದಲ್ಲಿ ತೊಡಗಿರುವ ಅವರು, ಮನೆ ಮನೆಯ ಬಾಗಿಲುಗಳನ್ನು ಬಡಿಯುತ್ತಾ, ತಮ್ಮ ಬೆಂಬಲದ ಸಂದೇಶವನ್ನು ಹರಡುತ್ತಿದ್ದಾರೆ. ರಂಝಾನ್ ಮಾಸದಲ್ಲಿ, ಉಪವಾಸ ಮುರಿದ ನಂತರವಷ್ಟೆ ನಿದ್ರಾಸ್ಥಿತಿಯಲ್ಲಿರುವ ಇಲ್ಲಿನ ದ್ವೀಪಗಳ ಎಚ್ಚರಗೊಂಡು ಮೇಲೇಳುತ್ತವೆ.

ಮಸೀದಿಯಲ್ಲಿ ರಾತ್ರಿ 10 ಗಂಟೆಯ ಪ್ರಾರ್ಥನೆ ಮುಗಿದ ನಂತರ ರಾಜಕೀಯ ಚಟುವಟಿಕೆಗಳು ಉತ್ತುಂಗಕ್ಕೇರುತ್ತವೆ. ಮತದಾರರ ಗಾತ್ರದಲ್ಲಿ ಅತ್ಯಂತ ಸಣ್ಣ ಲೋಕಸಭಾ ಕ್ಷೇತ್ರವಾಗಿರುವ ಲಕ್ಷದ್ವೀಪದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದು, ರಂಝಾನ್ ತಿಂಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಬೀದಿಗಳು ಹಾಗೂ ಸಮುದ್ರ ತೀರಗಳಲ್ಲಿ ರಾತ್ರಿ 10 ಗಂಟೆಯ ನಂತರ ಪ್ರಾರಂಭಿಸುತ್ತಾರೆ.

ಈ ರಾತ್ರಿಯ ಹೊತ್ತಿನಲ್ಲಿ ರಾಜಕೀಯ ಪಕ್ಷಗಳಿಗೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಚಾರ ಮಾಡಲು ಅವಕಾಶ ಸಿಗುತ್ತಿದೆ. ತಡ ರಾತ್ರಿಯ ಹೊರತಾಗಿಯೂ ಎನ್ಸಿಪಿ(ಎಸ್) ಕಾರ್ಯಕರ್ತರು ಚೈತನ್ಯದಿಂದ ಬೀಗುತ್ತಿದ್ದು, ತಮ್ಮ ನಾಯಕ ಮೂತುನ್ (ಫೈಸಲ್ ರನ್ನು ಪ್ರೀತಿಯಿಂದ ಕರೆಯುವ ಹೆಸರು) ಪರವಾಗಿ ಉತ್ಸಾಹದಿಂದ ಘೋಷಣೆ ಕೂಗುತ್ತಿದ್ದಾರೆ.

ಫೈಸಲ್ ರ ಬಿತ್ತಿ ಚಿತ್ರ ಹಾಗೂ ಸೂಚನೆಗಳನ್ನು ಪ್ರದರ್ಶಿಸುವಾಗ, “ಪಿರನ್ನ ಮನ್ನಿನು ವೆಂಡಿ” (ಮಾತೃಭೂಮಿಗಾಗಿ) ಎಂದು ಅವರು ಘೋಷಣೆಗಳನ್ನು ಕೂಗುತ್ತಾರೆ. “ಲಕ್ಷದ್ವೀಪದ ಜನರಿಗೆ ತೊಂದರೆ ನೀಡಲು ಹಾಲಿ ಆಡಳಿತವು ಹಲವಾರು ನೂತನ ನಿಯಮಗಳನ್ನು ಜಾರಿಗೆ ತಂದಾಗ ಅವರು ಮಾತ್ರ ಲಕ್ಷದ್ವೀಪದ ಜನರ ಪರವಾಗಿ ನಿಂತರು. ನಮಗಾಗಿ ಹೋರಾಡಲು ಅವರು ಮತ್ತೆ ಸಂಸದರಾಗಿ ಮುಂದುವರಿಯುವುದು ನಮಗೆ ಬೇಕಿದೆ” ಎಂದು ಎನ್ಸಿಪಿ(ಎಸ್) ಅಗಟ್ಟಿ ಘಟಕದ ಉಪಾಧ್ಯಕ್ಷ ಮೈಶಾ ಹೇಳುತ್ತಾರೆ.

ಒಂದು ವೇಳೆ ಕೇಂದ್ರದಲ್ಲಿ INDIA ಮೈತ್ರಿಕೂಟವು ಅಧಿಕಾರ ಹಿಡಿಯುವಲ್ಲಿ ವಿಫಲವಾದರೆ, ದ್ವೀಪದ ಜನರ ಪರವಾಗಿ ಧ್ವನಿ ಎತ್ತಲು ನಮಗೆ ಫೈಸಲ್ ಬೇಕು ಎಂಬುದು ಅವರ ನಂಬಿಕೆಯಾಗಿದೆ. “ಇಲ್ಲಿನ ಸ್ಪರ್ಧೆ ಇಂಡಿಯಾ ಮೈತ್ರಿ ಕೂಟದ ಮೈತ್ರಿ ಪಕ್ಷಗಳೇ ಆಗಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ (ಎಸ್) ನಡುವೆ ಆಗಿದೆ. ಒಂದು ವೇಳೆ INDIA ಮೈತ್ರಿಕೂಟವೇನಾದರೂ ಗೆದ್ದರೆ, ನಮ್ಮ ಸಂಸದರು ಆಡಳಿತಾರೂಢ ರಂಗದ ಭಾಗವಾಗಲಿದ್ದಾರೆ. ಆದರೆ, ಬಿಜೆಪಿಯೇ ಅಧಿಕಾರವನ್ನು ಉಳಿಸಿಕೊಂಡರೆ, ನಮ್ಮ ಪರವಾಗಿ ನಿಲ್ಲಲು ಫೈಸಲ್ ರಂತಹ ಬಲಿಷ್ಠ ನಾಯಕನ ಅಗತ್ಯವಿದೆ” ಎನ್ನುತ್ತಾರೆ ಎನ್ಸಿಪಿ (ಎಸ್‍) ಅಗಟ್ಟಿ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್.

ಪರಸ್ಪರರನ್ನು ಚೆನ್ನಾಗಿ ಬಲ್ಲ ದ್ವೀಪದ ಮತದಾರರು, ಪಕ್ಷದ ಕಾರ್ಯಕರ್ತರ ಸಂದೇಶಗಳನ್ನು ಸ್ವೀಕರಿಸುತ್ತಿದ್ದರು. ದ್ವಿಚಕ್ರ ವಾಹನದ ಮೇಲೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಹಮ್ದುಲ್ಲಾ ಸಯೀದ್ ಅವರೊಂದಿಗೆ ಕೆಲವರು ಮಾತುಕತೆಯಲ್ಲಿ ತೊಡಗಿದ್ದರು.

ಬೀದಿಗಳಲ್ಲಿ ಸಯೀದ್ ನಡೆದು ಹೋಗುವಾಗ, ಫೈಸಲ್ ರ ಬೆಂಬಲಿಗರು ಅವರನ್ನು ಗೇಲಿ ಮಾಡಿದರಾದರೂ, ಸಯೀದ್ ಅದಕ್ಕೆ ಪ್ರತಿಯಾಗಿ ಸಂತೋಷದಿಂದ ಅವರತ್ತ ಕೈಬೀಸಿದರು. ತಕ್ಷಣವೇ ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಯುವಕನಿಗೆ ಸೂಚನೆ ನೀಡಿದ ಹಿರಿಯ ಎನ್ಸಿಪಿ (ಎಸ್) ಕಾರ್ಯಕರ್ತರೊಬ್ಬರು, ಅಸಮರ್ಪಕ ನಡವಳಿಕೆಯ ವಿರುದ್ಧ ಕಠಿಣ ಎಚ್ಚರಿಕೆ ನೀಡಿದರು. “ನಾವು ಯಾವ ಕಾರಣಕ್ಕೂ ನಮ್ಮ ಸಭ್ಯತೆಯನ್ನು ಕಳೆದುಕೊಳ್ಳಬಾರದು” ಎಂದು ಆತನಿಗೆ ಕಿವಿಮಾತು ಹೇಳಿದರು.

“ಹಲವು ನೂರು ಕಿಮೀ ಸುತ್ತಾಡಿದ ನಂತರ, ಲಕ್ಷದ್ವೀಪವು ಅಭ್ಯರ್ಥಿಗಳ ಪ್ರಚಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಪ್ರದರ್ಶಿಸುತ್ತಿದೆ” ಎಂದು ಮಾಜಿ ಸಂಸದರೂ ಆದ ಸಯೀದ್ ಹೇಳುತ್ತಾರೆ. ಅವರು ಲಕ್ಷದ್ವೀಪದ ಅತ್ಯಂತ ದೀರ್ಘ ಸಂಸದರು ಎಂಬ ದಾಖಲೆ ಹೊಂದಿದ್ದ ಪಿ.ಎಂ.ಸಯೀದ್ ಅವರ ಪುತ್ರರೂ ಆಗಿದ್ದಾರೆ.

“ನಾವು ಈ ಮತದಾರರೊಂದಿಗೆ ಸಂಪರ್ಕ ಸಾಧಿಸುವ ಹೊತ್ತಿಗೆ ಬಳಲಿಕೆ ಬಂದು ಬಿಡುತ್ತದೆ” ಎಂದೂ ಹೇಳುತ್ತಾರೆ ಸಯೀದ್. ಲಕ್ಷದ್ವೀಪದ ವಿಶಿಷ್ಟ ಸ್ಥಳಾಕೃತಿಯೊಂದಿಗೆ ಸಮಸ್ಯೆ ಸೃಷ್ಟಿಸುವ ಸಂಪರ್ಕ ವಿಷಯವು ಅಭ್ಯರ್ಥಿಗಳು ಎದುರಿಸುವ ಸವಾಲುಗಳನ್ನು ದುಪ್ಪಟ್ಟುಗೊಳಿಸುತ್ತವೆ.

“ನಾವೀಗ ಇತರ ದ್ವೀಪಗಳಿಗೆ ಹೋಗಲು ಸ್ಥಳೀಯ ದೋಣಿಯನ್ನು ಬಾಡಿಗೆ ಪಡೆದಿದ್ದೇವೆ. ಇದು ಅತ್ಯಂತ ದುಬಾರಿಯಾಗಿದ್ದರೂ, ನಮ್ಮಲ್ಲಿ ಬೇರೆ ಅಯ್ಕೆ ಇಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಸಯೀದ್.

ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ, ಇಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಗಳು ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನವೇ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದರು. ಇದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಉಂಟಾಗದಿರಲಿ ಎಂಬ ಇರಾದೆಯೂ ಇತ್ತು. ಉದ್ದನೆಯ ಗಡ್ಡ ಹಾಗೂ ಸಾಧಾರಣ ನಿಲುವನ್ನು ಹೊಂದಿರುವ ಸಯೀದ್, ಎರಡು ಬಾರಿಯ ಸಂಸದರು ಲಕ್ಷದ್ವೀಪದ ಜನರ ಹಕ್ಕಿಗಾಗಿ ಹೋರಾಡುವಲ್ಲಿ ದಯನೀಯ ಸೋಲು ಅನುಭವಿಸಿದ್ದಾರೆ ಎಂದು ಆರೋಪಿಸುತ್ತಾರೆ.

“ಅವರ ಬೆಂಬಲದಿಂದಾಗಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕೇಂದ್ರ ಸರಕಾರವು ರಾಜಕೀಯ ನೇಮಕಾತಿಯ ಭಾಗವಾಗಿ ಲಕ್ಷದ್ವೀಪಕ್ಕೆ ನೂತನ ಆಡಳಿತಗಾರರನ್ನು ನೇಮಕ ಮಾಡಿತು. ಈ ದ್ವೀಪದ ಜನರು ಅದರಿಂದ ನರಳುತ್ತಿದ್ದಾರೆ” ಎನ್ನುತ್ತಾರೆ ಸಯೀದ್.

“ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಶತಸ್ಸಿದ್ಧವಾಗಿದ್ದು, ಅದರಿಂದ ಸರಕಾರದಲ್ಲಾಗುವ ಬದಲಾವಣೆಯು ಲಕ್ಷದ್ವೀಪಕ್ಕೆ ಲಾಭವನ್ನು ತರಲಿದೆ. ಈ ದ್ವೀಪ ಸಮೂಹದ ಜನರಿಗಾಗಿ ಇದು ಅತ್ಯಗತ್ಯವಾಗಿದೆ. ನಮ್ಮ ನೆಲವನ್ನು ನಮ್ಮಿಂದ ಕಸಿದುಕೊಂಡಿರುವುದರಿಂದ ನಾವೀಗ ಅಂಚಿಗೆ ದೂಡಲ್ಪಟ್ಟಿದ್ದೇವೆ” ಎಂದು ಮಾಜಿ ಸಂಸದರೂ ಆದ ಸಯೀದ್ ಅಭಿಪ್ರಾಯ ಪಡುತ್ತಾರೆ.

ಇತರರನ್ನು ಸಂಪರ್ಕಿಸಲು ಕೆಲವು ದ್ವೀಪಗಳು ಕೇವಲ ಒಂದು ಹಡಗನ್ನು ಮಾತ್ರ ಹೊಂದಿದ್ದು, ಅದು ಒಂದು ವಾರಕ್ಕೊಮ್ಮೆಯೊ ಎರಡು ಬಾರಿಯೊ ಕಾರ್ಯಾಚರಣೆ ನಡೆಸುತ್ತದೆ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ, ಮುಖ್ಯ ದ್ವೀಪವನ್ನು ಸಂಪರ್ಕಿಸಲು ಹತ್ತು ಹಡಗುಗಳಿದ್ದವು ಎಂದು ಸಯೀದ್ ಹೇಳುತ್ತಾರೆ.

ಇದರರ್ಥ ಪ್ರತಿ ದ್ವೀಪವೂ ಪ್ರತಿ ದಿನ ಒಂದು ಹಡಗನ್ನಾದರೂ ಹೊಂದಿರುತ್ತಿತ್ತು. ಈಗ ನಮಗೆ ಮುಖ್ಯ ದ್ವೀಪದಿಂದ ಕೇವಲ ಒಂದು ಹಡಗಿದೆ ಎಂದು ಸಯೀದ್ ಬೇಸರ ವ್ಯಕ್ತಪಡಿಸುತ್ತಾರೆ. ಅಂದ್ರೋತ್ ನಲ್ಲಿ ಪ್ರಚಾರ ನಡೆಸುತ್ತಿದ್ದ ಅವರು, ಮರಳಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದು ಕೇವಲ ಚುನಾವಣೆಯಲ್ಲ; ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಅವರು ತಮ್ಮ ಮಾತು ಮುಗಿಸಿದರು.

“ನಾವೆಲ್ಲರೂ ಅಭಿವೃದ್ಧಿಯ ಪರವಾಗಿದ್ದೇವೆ. ಆದರೆ, ಅದು ಜನರ ಬದುಕು ಅಥವಾ ದ್ವೀಪವಾಸಿಗಳ ಸಂಸ್ಕೃತಿಯ ಬೆಲೆಯನ್ನು ತೆತ್ತಲ್ಲ. ನಮಗೆ ಎನ್ಡಿಎಯನ್ನು ಅಧಿಕಾರದಿಂದ ಕಿತ್ತೊಗೆಯುವುದು ಬೇಕಿದೆ” ಎಂದು ಫೈಸಲ್ ಹೇಳುತ್ತಾರೆ. ಮತದಾರರಿಗೆ ನನ್ನ ಬಗ್ಗೆ ವಿಶ್ವಾಯಸವಿದ್ದು, ಕಳೆದ ಎರಡು ಅವಧಿಯಲ್ಲಿ ನಾನು ಮಾಡಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸಲು ಬಯಸುತ್ತಾರೆ ಎಂದೂ ಅವರು ಪ್ರತಿಪಾದಿಸುತ್ತಾರೆ.

ಸೌಜನ್ಯ: economictimes.indiatimes.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News