ಕೆನಡಾದ ಬಬ್ಬರ್ ಖಾಲ್ಸಾ ಮುಖಂಡ ಲಕ್ಬೀರ್ ಸಿಂಗ್ ಲಂಡಾ ಘೋಷಿತ ಉಗ್ರ: ಗೃಹ ಸಚಿವಾಲಯ
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕೆನಡಾ ನಿವಾಸಿ, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ನ ಮುಖಂಡ ಲಕ್ಬೀರ್ ಸಿಂಗ್ ಲಂಡಾ ಘೋಷಿತ ಉಗ್ರ ಎಂದು ಗೃಹ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಕಳ್ಳಸಾಗಾಣಿಕೆ ಮಾಡುವ ಜಾಲದ ಮೇಲ್ವಿಚಾರಕನಾಗಿದ್ದು, ಕಳೆದ ವರ್ಷ ಮೇ 9ರಂದು ಮೊಹಾಲಿಯಲ್ಲಿ ಪಂಜಾಬ್ ಪೊಲೀಸ್ ನ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ರಾಕೆಟ್ ಚಾಲಿತ ಗ್ರೆನೇಡ್ (ಆರ್ಪಿಜಿ) ದಾಳಿಯ ಸೂತ್ರಧಾರ. ಈತ ಪಂಜಾಬ್ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಈ ಪ್ರಕರಣದಲ್ಲಿ ಬೇಕಾದ ಆರೋಪಿಯಾಗಿದ್ದ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿದ ಅಧಿಸೂಚನೆಯ ಪ್ರಕಾರ ಲಂಡಾ, ಖಾಲಿಸ್ತಾನ ಟೈಗರ್ ಫೋರ್ಸ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಸಿಕ್ಖ್ ಫಾರ್ ಜಸ್ಟೀಸ್ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಸೇರಿದಂತೆ ಕೆನಡಾ ಮೂಲದ ಖಾಲಿಸ್ತಾನ ಪರ ಶಕ್ತಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ.
ಪಂಜಾಬ್ ನ ತರಣ್ ಜಿಲ್ಲೆಯ ಹರಿಕೆ ನಿವಾಸಿಯಾಗಿದ್ದ ಈತ ಪ್ರಸ್ತುತ ಕೆನಡಾದ ಅಲ್ಬೆರ್ಟಾದಲ್ಲಿರುವ ಎಡ್ಮಾಂಟನ್ ನಲ್ಲಿ ವಾಸವಿದ್ದಾನೆ.