ಮಹಾರಾಷ್ಟ್ರ: ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧಿಸುವಂತೆ ಮನವಿ ಮಾಡಿದ ಸ್ವತಂತ್ರ ಅಭ್ಯರ್ಥಿ; ಕಾರಣವೇನು ಗೊತ್ತೇ?

Update: 2024-11-18 08:24 GMT

ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರದ ಧಾರಾಶಿವ್‌ನಲ್ಲಿನ ಮತಗಟ್ಟೆಗಳ ಬಳಿ ಚಪ್ಪಲಿಯನ್ನು ನಿಷೇಧಿಸಬೇಕು ಎಂಬ ವಿಚಿತ್ರ ಮನವಿ ಮಾಡಿದ್ದಾರೆ. ಚಪ್ಪಲಿ ತನ್ನ ಚುನಾವಣಾ ಚಿಹ್ನೆಯಾಗಿದ್ದು, ಚಪ್ಪಲಿ ಧರಿಸುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪರಂದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರುದಾಸ್ ಸಂಭಾಜಿ ಕಾಂಬಳೆ ಅವರು ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಚಿಹ್ನೆಗಳನ್ನು ಮತಗಟ್ಟೆಗಳ ಬಳಿ ಪ್ರದರ್ಶಿಸುವಂತಿಲ್ಲ.

ಮತದಾರರು ಅಥವಾ ಅಧಿಕಾರಿಗಳು ಬೂತ್‌ಗಳ ಬಳಿ ಚಪ್ಪಲಿ ಧರಿಸಲು ಅವಕಾಶ ನೀಡುವುದರಿಂದ ನಿಯಮಗಳನ್ನು ಉಲ್ಲಂಘಿಸಿದಂತೆ ಆಗಬಹುದು ಎಂದು ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ ಕಾಂಬ್ಳೆ ಅವರು ವಾದಿಸಿದ್ದಾರೆ.

“ನನ್ನ ಚುನಾವಣಾ ಚಿಹ್ನೆ ಚಪ್ಪಲ್ ಆಗಿದೆ. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲ್ ಧರಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಅಂತಹ ಸಮಸ್ಯೆಗಳನ್ನು ತಡೆಗಟ್ಟಲು, ಚುನಾವಣಾ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಮತದಾರರು ಸೇರಿದಂತೆ ಎಲ್ಲರಿಗೂ ಚಪ್ಪಲಿಯನ್ನು ನಿಷೇಧಿಸುವಂತೆ ನಾನು ವಿನಂತಿಸುತ್ತೇನೆ. ಯಾರಾದರೂ ಅವುಗಳನ್ನು ಧರಿಸಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕಾಂಬ್ಳೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News