‘ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ’: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷ ತೊರೆದ RLD ಯ ಪ್ರಮುಖ ನಾಯಕ

Update: 2024-04-01 05:53 GMT

ಶಾಹಿದ್ ಸಿದ್ದೀಕಿ (Photo: X/@shahid_siddiqui)

ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ NDA ಮೈತ್ರಿಕೂಟವನ್ನು ರಾಷ್ಟ್ರೀಯ ಲೋಕ ದಳ (RLD) ಪಕ್ಷವು ಸೇರ್ಪಡೆಯಾಗಿರುವುದರಿಂದ ಆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಾಹಿದ್ ಸಿದ್ದೀಕಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಿದ್ದಿಕಿ, “ಭಾರತವನ್ನು ವಿಶ್ವದ ಅದ್ಭುತ ದೇಶಗಳ ಪೈಕಿ ಒಂದನ್ನಾಗಿ ಒಗ್ಗೂಡಿ ಮಾಡಿದ್ದ ಎಲ್ಲ ಸಂಸ್ಥೆಗಳ ವಿನಾಶವನ್ನು ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

“ನಿನ್ನೆ ನಾನು ರಾಷ್ಟ್ರೀಯ ಲೋಕ ದಳ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ. ನಾನು ಮತ್ತು ನನ್ನ ಕುಟುಂಬವು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಸಿಡಿದು ನಿಂತಿತ್ತು. ಆದರೀಗ, ಭಾರತವನ್ನು ವಿಶ್ವದ ಅದ್ಭುತ ದೇಶಗಳ ಪೈಕಿ ಒಂದನ್ನಾಗಿ ಒಗ್ಗೂಡಿ ಮಾಡಿದ್ದ ಎಲ್ಲ ಸಂಸ್ಥೆಗಳ ವಿನಾಶವನ್ನು ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ. ಪಕ್ಷದಲ್ಲಿನ ಜಯಂತ್ ಪಾಟೀಲ್ ಹಾಗೂ ನನ್ನ ಸಹೋದ್ಯೋಗಿಗಳಿಗೆ ನೆನಪುಗಳು ಹಾಗೂ ಶುಭ ಹಾರೈಕೆಗಳು” ಎಂದು ಸೋಮವಾರ ಹೇಳಿದ್ದಾರೆ.

ತಮ್ಮ ತಾತ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಬಿಜೆಪಿ ನೇತೃತ್ವದ NDA ಮೈತ್ರಿಕೂಟವನ್ನು ಜಯಂತ್ ಚೌಧರಿ ಸೇರಿದ್ದಾರೆ. ಇದು ಪಕ್ಷದ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಕೆಲ ನಾಯಕರು ಪಕ್ಷ ತೊರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News