2019 ರ ಮಾತುಕತೆಯಲ್ಲಿ ಅದಾನಿ ಅಲ್ಲ, ಶರದ್ ಪವಾರ್ ಭಾಗವಹಿಸಿದ್ದರು: ದೇವೇಂದ್ರ ಫಡ್ನವಿಸ್
ಮುಂಬೈ: 2019 ರ ನವೆಂಬರ್‌ನಲ್ಲಿ ಹೊಸದಿಲ್ಲಿ ನಡೆದ ಬಿಜೆಪಿ-ಎನ್‌ಸಿಪಿ ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ಇರಲಿಲ್ಲ. ಆದರೆ ಶರದ್ ಪವಾರ್ ಭಾಗವಹಿಸಿದ್ದರು. ಅವರು ನಮಗೆ ದ್ರೋಹ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ TOI ಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಭೆಯಲ್ಲಿ ಅದಾನಿ ಹಾಜರಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಹೇಳಿಕೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವೀಸ್, “ಸಭೆ ನಡೆದಿದ್ದು ಹೌದು. ಆದರೆ ಅದು ಅದಾನಿ ಅವರ ನಿವಾಸದಲ್ಲಿ ನಡೆದಿರಲಿಲ್ಲ ಅಥವಾ ಅವರು ಹಾಜರಾಗಿರಲಿಲ್ಲ. ನನ್ನ ಹೊರತಾಗಿ, ಗೃಹ ಸಚಿವ ಅಮಿತ್ ಶಾ, ಶರದ್ ಪವಾರ್, ಪ್ರಫುಲ್ ಪಟೇಲ್ ಮತ್ತು ಅಜಿತ್ ಪವಾರ್ ಸಭೆಯಲ್ಲಿ ಭಾಗವಹಿಸಿದ್ದರು,” ಎಂದರು.
“ಸರ್ಕಾರ ರಚನೆ, ಖಾತೆಗಳ ಹಂಚಿಕೆ ಮತ್ತು ಸಮನ್ವಯ ಸಚಿವರ ನೇಮಕದ ಕುರಿತು ಸರಣಿ ಚರ್ಚೆ ನಡೆಯಿತು. ಯೋಜನೆ ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ನನಗೆ ಮತ್ತು ಅಜಿತ್ ಪವಾರ್ ಅವರಿಗೆ ವಹಿಸಲಾಗಿತ್ತು. ಯೋಜನೆ ಜಾರಿ ಹಂತದಲ್ಲಿದ್ದಾಗ ಶರದ್ ಪವಾರ್ ಸದ್ದಿಲ್ಲದೆ ಸ್ಥಳದಿಂದ ಹಿಂದೆ ಸರಿದರು. ಪವಾರ್ ಈ ರೀತಿ ಹಿಂದೆ ಸರಿಯುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಸ್ಥಿರ ಸರ್ಕಾರವನ್ನು ರಚಿಸಲು ಎನ್‌ಸಿಪಿಯನ್ನು ನಮ್ಮೊಂದಿಗೆ ಸೇರಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿತ್ತು", ಎಂದು ಫಡ್ನವೀಸ್ ಹೇಳಿದರು.
ಸರ್ಕಾರ ರಚನೆ ವಿಳಂಬದಿಂದಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಪ್ರಸ್ತಾಪವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಫಡ್ನವಿಸ್, "ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ಶರದ್ ಪವಾರ್ ಅವರು ರಾಜ್ಯಪಾಲರಿಗೆ ಪತ್ರ ಬರೆಯುವುದು ಎಂದು ನಿರ್ಧರಿಸಲಾಗಿತ್ತು. ಪತ್ರವನ್ನು ಸಿದ್ಧಪಡಿಸಿ ಶರದ್ ಪವಾರ್ ಅವರಿಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಪವಾರ್ ಅವರು ಕೆಲವು ತಿದ್ದುಪಡಿಗಳನ್ನು ಮಾಡಿದ್ದರು", ಎಂದರು.
ಮಹಾರಾಷ್ಟ್ರ ಚುನಾವಣೆಯ ಬಳಿಕ ಉದ್ಧವ್ ಠಾಕ್ರೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಫಡ್ನವಿಸ್, "ಇದು ಅಸಾಧ್ಯವೆಂದು ತೋರುತ್ತದೆ" ಎಂದು ಹೇಳಿದರು.
ಮಹಾರಾಷ್ಟ್ರದ ಜನರು ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿಗೆ ನಿರ್ಣಾಯಕ ಜನಾದೇಶವನ್ನು ನೀಡಲಿದ್ದಾರೆ. ನಾನು ಸಿಎಂ ರೇಸ್‌ನಲ್ಲಿಲ್ಲ. ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯು ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಅವರೊಂದಿಗೆ ಸಮಾಲೋಚಿಸಿ ಹೊಸ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ದೇವೇಂದ್ರ ಫಡ್ನವಿಸ್ ಅಭಿಪ್ರಾಯಪಟ್ಟರು.