ಕೇರಳ | ಪೊಲೀಸರಿಗೆ ಕರೆ ಮಾಡಿ ಎಡವಟ್ಟು ಮಾಡಿಕೊಂಡ ಸೈಬರ್ ವಂಚಕ!

Update: 2024-11-15 06:06 GMT

Photo credit: mathrubhumi.com

ತ್ರಿಶೂರ್ : ಮುಂಬೈ ಪೊಲೀಸ್ ಅಧಿಕಾರಿಯಂತೆ ನಟಿಸಿ ವಂಚಕನೊಬ್ಬ ಕೇರಳದ ತ್ರಿಶೂರ್ ಸೈಬರ್ ಪೊಲೀಸರಿಗೆ ಕರೆ ಮಾಡಿದ ಸ್ವಾರಸ್ಯಕರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಪೊಲೀಸ್ ಸಮವಸ್ತ್ರ ಧರಿಸಿದ್ದ ವಂಚಕ ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ತ್ರಿಶೂರ್ ಸೈಬರ್ ಸೆಲ್ ಅಧಿಕಾರಿ ಕ್ಯಾಮೆರಾ ಆನ್ ಮಾಡಿದ ತಕ್ಷಣ, ವಂಚಕನಿಗೆ ತಾನು ನಿಜವಾಗಿಯೂ ಪೊಲೀಸರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಮನವರಿಕೆಯಾಗಿದೆ.

ಈ ಕುರಿತು ತ್ರಿಶೂರ್ ಸಿಟಿ ಪೊಲೀಸರು ಹಂಚಿಕೊಂಡಿರುವ ವೀಡಿಯೊ ವೈರಲ್ ಆಗಿದ್ದು, 162,000 ಮಂದಿ ವೀಕ್ಷಿಸಿದ್ದಾರೆ. 7,600 ಮಂದಿ ಲೈಕ್‌ ಮಾಡಿದ್ದಾರೆ. ನೈಜ ಪೋಲೀಸರ ಜೊತೆ ಮಾತನಾಡುತ್ತಿರುವುದನ್ನು ಕಂಡು ವಂಚಕನು ಒಮ್ಮೆಲೇ ತಬ್ಬಿಬ್ಬಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರನ್ನು ನಗೆಗಡಲಲ್ಲಿ ತೇಲಿಸಿದೆ.  "ಚೆನ್ನಾಗಿ ಮಾಡಿದ್ದೀರಿ, ಪೋಲೀಸ್" ಎಂದು ನೆಟ್ಟಿಗರೊಬ್ಬರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, "ಲೇ ಕಳ್ಳ: ಓ ಸರ್, ಇದು ತಮಾಷೆಯ ವೀಡಿಯೊ ಕರೆ ... ಅಲ್ಲಿ ನೋಡಿ, ಕ್ಯಾಮೆರಾ ಇದೆ." ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, “ಪೊಲೀಸರಿಗೆ ಸಿಕ್ಕಿಬಿದ್ದಾಗ ಕಳ್ಳನೊಬ್ಬ ನಗುತ್ತಿರುವುದು ಇದೇ ಮೊದಲು” ಎಂದು ವ್ಯಂಗ್ಯವಾಡಿದ್ದಾರೆ

ಸೈಬರ್ ವಂಚನೆಯ ಅಪಾಯಗಳನ್ನು ವೀಕ್ಷಕರಿಗೆ ತಿಳಿಸಲು ತ್ರಿಶೂರ್ ಪೊಲೀಸರು ವೀಡಿಯೊವನ್ನು ಬಳಸಿದ್ದಾರೆ. ಯಾರಾದರೂ ಸೈಬರ್ ಅಪರಾಧಕ್ಕೆ ಬಲಿಯಾದವರು ತಕ್ಷಣ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ಅದನ್ನು ವರದಿ ಮಾಡುವಂತೆ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News