ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಸಂಸದನಿಗಾಗಿ EVM ಹ್ಯಾಕ್ ಮಾಡಲು 52 ಕೋಟಿ ರೂ.ಗೆ ಬೇಡಿಕೆಯಿಟ್ಟ ಸೈಬರ್ ತಜ್ಞ!

Update: 2024-11-15 09:49 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ಚುನಾವಣೆ ನಡೆಯಲಿದ್ದು,ಅದಕ್ಕೂ ಮುನ್ನ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ) ಗಳ ಹ್ಯಾಕಿಂಗ್ ವರದಿಗಳು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಸೃಷ್ಟಿಸಿವೆ. ಸೈಬರ್ ತಜ್ಞ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ಇವಿಎಮ್‌ಗಳನ್ನು ಹಲವಾರು ಸಲ ಹ್ಯಾಕ್ ಮಾಡಲಾಗಿತ್ತು, ಗಮನಾರ್ಹವಾಗಿ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರೀ ಜಯವನ್ನು ಗಳಿಸಿದ್ದ 2014ರ ಚುನಾವಣೆಗಳಲ್ಲಿಯೂ ಇದು ನಡೆದಿತ್ತು ಎಂದು ಪ್ರತಿಪಾದಿಸಿದ್ದಾನೆ.

ಸೈಬರ್ ತಜ್ಞ ಸಯ್ಯದ್ ಶೂಜಾ ತಾನು ಈ ಹಿಂದೆ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದ ಅಮೆರಿಕದ ರಕ್ಷಣಾ ಇಲಾಖೆಯ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಮೈತ್ರಿಕೂಟವೊಂದರ ಗೆಲುವಿಗೆ ನೆರವಾಗಬಲ್ಲೆ ಎಂದು ಹೇಳಿಕೊಂಡಿದ್ದಾನೆ.

ಈ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿದ ‘ಇಂಡಿಯಾ ಟುಡೇ’ ವರದಿಗಾರ ರಾಜ್ಯದ ಸಂಸದರೋರ್ವರ ಸೋಗಿನಲ್ಲಿ ಶೂಜಾನನ್ನು ಸಂಪರ್ಕಿಸಿದ್ದು, ಈ ಸಂದರ್ಭ 288 ವಿಧಾನಸಭಾ ಕ್ಷೇತ್ರಗಳ ಪೈಕಿ 281ರಲ್ಲಿ ತಾನು ಇವಿಎಮ್‌ಗಳನ್ನು ಹ್ಯಾಕ್ ಮಾಡಬಲ್ಲೆ ಎಂದು ಆತ ತಿಳಿಸಿದ್ದಾನೆ. ವಿವಿಪ್ಯಾಟ್ ವಿವರಗಳನ್ನು ಒದಗಿಸಿದರೆ 63 ಕ್ಷೇತ್ರಗಳಲ್ಲಿ ಇವಿಎಮ್‌ಗಳನ್ನು ಹ್ಯಾಕ್ ಮಾಡಲೂ ಆತ ಒಪ್ಪಿಕೊಂಡಿದ್ದಾನೆ.

ವಿವಿಪ್ಯಾಟ್ ವಿವರಗಳನ್ನು ಬಳಸಿಕೊಂಡು ಹೇಗೆ ಹ್ಯಾಕ್ ಮಾಡುತ್ತೀರಿ ಎಂಬ ವರದಿಗಾರನ ಪ್ರಶ್ನೆಗೆ ಉತ್ತರಿಸಿದ ಶೂಜಾ, ‘ನಾನು ಅದನ್ನು ಪ್ರಿ-ಪ್ರೋಗ್ರಾಮ್ ಮಾಡುತ್ತೇನೆ ಮತ್ತು ಅದು ಬಿಜೆಪಿ ಪರವಾಗಿ ಪ್ರಿ-ಪ್ರೋಗ್ರಾಮ್ ಆಗಿದ್ದರೆ ಚುನಾವಣೆಯ ದಿನ ಟ್ರಾನ್ಸ್‌ಮಿಷನ್ ಆರಂಭವಾಗುವಾಗ ನಾನು ಅದನ್ನು ತಡೆದು ನನ್ನ ಕಡೆಯಿಂದ ಫೈಲ್‌ ಅನ್ನು ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇನೆ ಮತ್ತು ಅದು ತಮ್ಮ ಫೈಲ್ ಎಂದು ಅವರು ಭಾವಿಸುತ್ತಾರೆ ’ಎಂದು ತಿಳಿಸಿದ್ದಾನೆ. ಇವಿಎಮ್‌ಗಳು ಆನ್ ಆಗಿಲ್ಲದಿದ್ದರೂ ಟ್ರಾನ್ಸ್‌ಮಿಷನ್ ಮುಂದುವರಿಯುತ್ತದೆ ಎಂದೂ ಆತ ಹೇಳಿಕೊಂಡಿದ್ದಾನೆ.

ಯಂತ್ರವನ್ನು ತೆರೆದಾಗ ಹೊಸ ಫೈಲ್ ಬರುತ್ತದೆ ಮತ್ತು ಟ್ರಾನ್ಸ್‌ಮಿಷನ್ ಅನ್ನು ಎಣಿಸಲಾಗುತ್ತದೆ. ಅದು ಅವರಿಗೆ ಸುಲಭ. ತಾನು ಮುಂದಿನ ಮೂರು ದಿನಗಳವರೆಗೆ ಜಾಗರೂಕನಾಗಿರಬೇಕು ಮತ್ತು ಟ್ರಾನ್ಸ್‌ಮಿಷನ್ ಪ್ರಗತಿಯಲ್ಲಿದೆಯೇ ಇಲ್ಲವೇ ಎಂದು ಪ್ರತಿ ಗಂಟೆಗೆ ಸ್ಕ್ಯಾನ್ ಮಾಡಬೇಕು ಎಂದು ಶೂಜಾ ವರದಿಗಾರನಿಗೆ ತಿಳಿಸಿದ್ದಾನೆ.

ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ ಮೈನರ್ ಮಾಡಿರುವ ಶೂಜಾ ತನ್ನ ಸೇವೆಗಳಿಗಾಗಿ 60 ಲಕ್ಷ ಡಾಲರ್‌ (ಸುಮಾರು 53-53 ಕೋಟಿ ರೂ.)ಗಳಿಗೆ ಬೇಡಿಕೆಯಿಟ್ಟಿದ್ದಾನೆ.

ಇವಿಎಂ ಹ್ಯಾಕಿಂಗ್ ಕುರಿತು ಶೂಜಾ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಚುನಾವಣೆಗಳಲ್ಲಿ ಇವಿಎಮ್‌ಗಳ ಹ್ಯಾಕಿಂಗ್ ಮತ್ತು ರಿಗ್ಗಿಂಗ್ ಮಾಡಲಾಗಿದೆ ಎಂದು ಶೂಜಾ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ದೂರಿನ ಮೇರೆಗೆ ದಿಲ್ಲಿ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಸ್ಕೈಪ್ ಮೂಲಕ ಲಂಡನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶೂಜಾ,ತನ್ನ ತಂಡದ ಕೆಲವರು ಕೊಲ್ಲಲ್ಪಟ್ಟ ಬಳಿಕ ದೇಶದಲ್ಲಿ ತನಗೆ ಬೆದರಿಕೆಯಿದೆ ಎಂದು ತಾನು ಭಾವಿಸಿದ್ದರಿಂದ 2014ರಲ್ಲಿ ಭಾರತದಿಂದ ಪರಾರಿಯಾಗಿದ್ದೆ ಎಂದು ಹೇಳಿದ್ದ.

ಚುನಾವಣೆಗಳಲ್ಲಿ ಇವಿಎಂ ಹ್ಯಾಕಿಂಗ್ ಬಗ್ಗೆ ತಿಳಿದಿದ್ದರಿಂದ ಬಿಜೆಪಿ ನಾಯಕ ಗೋಪಿನಾಥ ಮುಂಡೆ ಅವರನ್ನು ‘ಕೊಲ್ಲಲಾಗಿತ್ತು’ ಎಂದೂ ಶೂಜಾ ಪ್ರತಿಪಾದಿಸಿದ್ದ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News