ಆಲ್ಟ್‌ನ್ಯೂಸ್‌ ಸಹ-ಸಂಸ್ಥಾಪಕ ಝುಬೈರ್‌ ವಿರುದ್ಧ ಪ್ರಕರಣ ದಾಖಲು; ಟ್ರೆಂಡಿಂಗ್ ಆದ #IStandWithZubair

Update: 2023-08-28 15:47 GMT

ಮುಹಮ್ಮದ್ ಝುಬೈರ್

ಹೊಸದಿಲ್ಲಿ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿಯ ಸೂಚನೆ ಮೇರೆಗೆ ಸಹಪಾಠಿಗಳಿಂತ ಹೊಡೆತ ತಿಂದ ಏಳು ವರ್ಷದ ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಮುಝಫ್ಫರನಗರ್‌ ಪೊಲೀಸರು ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮುಹಮ್ಮದ್‌ ಝುಬೇರ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದಾರೆ. ಎಕ್ಸ್ (ಟ್ವಿಟರ್) ನಲ್ಲಿ #IStandWithZubair ಟ್ರೆಂಡಿಂಗ್ ಆಗಿದೆ.

ಮಗುವಿನ ಗುರುತನ್ನು ಬಹಿರಂಗಗೊಳಿಸಿದಕ್ಕಾಗಿ ಝುಬೈರ್‌ ವಿರುದ್ಧ ಮುಝಫ್ಫರನಗರ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

“ಈ ಘಟನೆಯ ವೀಡಿಯೋವನ್ನು ಶೇರ್‌ ಮಾಡದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಸೂಚಿಸಿದ ನಂತರ ತಾವು ಈ ವೀಡಿಯೋ ತೆಗೆದುಹಾಕಿದ್ದೇನೆ. ತನ್ನನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ. ಈ ವೀಡಿಯೋವನ್ನು ಹಲವು ಸುದ್ದಿ ಸಂಸ್ಥೆಗಳ ಸಹಿತ ಹಲವರು ಪೋಸ್ಟ್‌ ಮಾಡಿದ್ದರೂ ನನ್ನ ಹೆಸರು ಮಾತ್ರ ಎಫ್‌ಐಆರ್‌ನಲ್ಲಿದೆ” ಎಂದು ಝುಬೈರ್‌ ಹೇಳಿದ್ದಾರೆ.

ಇದೀಗ, ನೆಟ್ಟಿಗರು ಝುಬೈರ್‌ ಪರ ಬೆಂಬಲಕ್ಕೆ ನಿಂತಿದ್ದು, ಕೋಮುವಾದಿ ಶಿಕ್ಷಕಿಯನ್ನು ಬಿಟ್ಟು ಝುಬೈರ್‌ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದು ‘ಎರಡು ಭಾರತದ’ ಇಂದಿನ ಪರಿಸ್ಥಿತಿ ಎಂದು ಹಲವರು ಆಕ್ಷೇಪಿಸಿದ್ದಾರೆ.

‘ಅಪರಾಧಿಯನ್ನು ಶಿಕ್ಷಿಸುವ ಬದಲು ಸಂದೇಶವಾಹಕನಿಗೆ ಗುಂಡು ಹಾರಿಸುವುದು ಈ ಪ್ರಜಾಪ್ರಭುತ್ವದಲ್ಲಿ ಹೊಸ ರೂಢಿಯಾಗಿದೆʼ ಎಂದು ಮನ್ನು ಮೇಹ ಎಂಬವರು ಟ್ವೀಟ್‌ ಮಾಡಿದ್ದಾರೆ.

“ಪತ್ರಿಕೋದ್ಯಮವು ಅಪರಾಧವಲ್ಲ, ಆದರೆ ಆಯ್ದ ಪತ್ರಕರ್ತರನ್ನು ಗುರಿಯಾಗಿಸುವುದು ಅಪರಾಧ. ಸಹೋದರ ಝುಬೈರ್ ದೇಶದ ಎಲ್ಲಾ ಕೋಮು ಪ್ರಚಾರದ ವಿರುದ್ಧ ಗುರಾಣಿಯಾಗಿ ನಿಂತಿದ್ದಾರೆ. ನಾನು ಝುಬೈರ್‌ ಪರವಾಗಿ ನಿಲ್ಲುತ್ತೇನೆ” ಎಂದು ಮತ್ತೊಬ್ಬ ಟ್ವಿಟರ್‌ ಬಳಕೆದಾರ ಟ್ವೀಟ್‌ ಮಾಡಿದ್ದಾರೆ.

“ಮಹಮ್ಮದ್ ಝುಬೈರ್ ಈ ಕರಾಳ ಕಾಲದ ಪ್ರಮುಖ ಪತ್ರಕರ್ತರು ಒಬ್ಬರು. ಅವರು (ಹಿಂದುತ್ವವಾದಿಗಳು) ತಮ್ಮ ದ್ವೇಷವನ್ನು ದಾಖಲಿಸಲು ಬಯಸುವುದಿಲ್ಲ, ಅದಕ್ಕಾಗಿಯೇ ಅವರು ಯಾವಾಗಲೂ ಝುಬೈರ್ ರನ್ನು ಗುರಿಯಾಗಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಅವರ ಜೊತೆ ನಿಲ್ಲಬೇಕು.” ಎಂದು ಕೌಶಿಕ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News