ವಯನಾಡ್ | ಆಹಾರ ಪೊಟ್ಟಣಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಚಿತ್ರ: ಪ್ರಕರಣ ದಾಖಲು

Update: 2024-11-09 06:44 GMT

Photo credit: ANI

ವಯನಾಡ್: ವಯನಾಡ್ ನಲ್ಲಿ ಆಹಾರ ಪೊಟ್ಟಣಗಳ ಮೇಲೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಭಾವಚಿತ್ರಗಳನ್ನು ಮುದ್ರಿಸಿರುವುದರ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 173 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನವೆಂಬರ್ 13ರಂದು ನಡೆಯಲಿರುವ ವಯನಾಡ್ ಲೋಕಸಭಾ ಉಪ ಚುನಾವಣೆಗೂ ಮುನ್ನ, ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಥಳೀಯ ಪೊಲೀಸರು ಸುಮಾರು 30 ಆಹಾರ ಪೊಟ್ಟಣಗಳನ್ನು ವಶಪಡಿಸಿಕೊಂಡ ನಂತರ ಈ ಪ್ರಕರಣ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪದಾಧಿಕಾರಿಗಳು, ಈ ಆಹಾರ ಪೊಟ್ಟಣಗಳನ್ನು ಜುಲೈ 30ರಂದು ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ಮೀಸಲಿರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಉಪ ಚುನಾವಣೆಗೂ ಮುನ್ನ ಮತದಾರರ ಮೇಲೆ ಪ್ರಭಾವ ಬೀರಲು ಈ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿತ್ತು ಎಂದು ಆಡಳಿತಾರೂಢ ಎಡರಂಗ ಆರೋಪಿಸಿದೆ. ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರ ನಿವಾಸದ ಬಳಿಯಿರುವ ಹಿಟ್ಟಿನ ಗಿರಣಿಯಲ್ಲಿ ಈ ಆಹಾರ ಪೊಟ್ಟಣಗಳು ಕಂಡು ಬಂದಿದ್ದವು. ಈ ಆಹಾರ ಪೊಟ್ಟಣಗಳು ಟೀ ಪುಡಿ, ಸಕ್ಕರೆ ಹಾಗೂ ಅಕ್ಕಿಯಂತಹ ಆಹಾರ ಪದಾರ್ಥಗಳನ್ನು ಹೊಂದಿದ್ದವು.

ಪಿಟಿಐ ಮೂಲಗಳ ಪ್ರಕಾರ, ಈ ಆಹಾರ ಪೊಟ್ಟಣಗಳ ಮೇಲೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಚಿತ್ರಗಳಲ್ಲದೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳೂ ಕಂಡು ಬಂದಿವೆ ಎನ್ನಲಾಗಿದೆ.

ಈ ಆಹಾರ ಪೊಟ್ಟಣಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಹಾಗೂ ಇದರಿಂದ ಚುನಾವಣೆಯ ಮೇಲಾಗುತ್ತಿದ್ದ ಸಂಭವನೀಯ ಪರಿಣಾಮದ ಬಗ್ಗೆ ಪರಿಶೀಲಿಸಲು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿ, ಸಿಪಿಐನ ಸತ್ಯನ್ ಮೊಕೇರಿ ಹಾಗೂ ಬಿಜೆಪಿಯ ನವ್ಯಾ ಹರಿದಾಸ್ ಅವರನ್ನು ಎದುರಿಸುತ್ತಿದ್ದಾರೆ.

ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್ ಬರೇಲಿ ಮತ್ತು ವಯನಾಡ್ ಲೋಕಸಭಾ ಕ್ಷೇತ್ರಗಳೆರಡರಿಂದಲೂ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ವಯನಾಡ್ ಲೋಕಸಭಾ ಕ್ಷೇತ್ರವನ್ನು ತೆರವುಗೊಳಿಸಿದ್ದರಿಂದ, ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News