ಕಾವೇರಿ ವಿವಾದ: ತಮಿಳುನಾಡು ರೈತರಿಂದ ಮಾನವ ತಲೆಬುರುಡೆಗಳೊಂದಿಗೆ ಪ್ರತಿಭಟನೆ
ಚೆನ್ನೈ: ರಾಜ್ಯದ ಪಾಲಿನ ನೀರಿಗಾಗಿ ಆಗ್ರಹಿಸಿ ತಮಿಳುನಾಡಿನ ತಿರುಚ್ಚಿಯ ರೈತರು ಪ್ರತಿಭಟನೆ ನಡೆಸುವುದರೊಂದಿಗೆ ಕಾವೇರಿ ವಿವಾದವು ಇನ್ನಷ್ಟು ಕಾವು ಪಡೆದುಕೊಂಡಿದೆ.
ದಿ ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಸೋಮವಾರ ರೈತರು ತಿರುಚ್ಚಿಯಲ್ಲಿ ಮಾನವ ತಲೆಬುರುಡೆಗಳ ಭಾಗಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿ ಕಾವೇರಿ ನೀರಿನಲ್ಲಿ ತಮ್ಮ ಪಾಲಿಗಾಗಿ ಆಗ್ರಹಿಸಿದರು.
ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು ಅಲ್ಪಾವಧಿಯ ಕುರುವೈ ಬೆಳೆಗೆ ಸೂಕ್ತ ಪರಿಹಾರವನ್ನು ನೀಡುವಂತೆಯೂ ಆಗ್ರಹಿಸಿದರು.
‘ನಮ್ಮ ಬೆಳೆಗಳಿಗೆ ಕೇಂದ್ರ ಸರಕಾರವು ಸೂಕ್ತ ಬೆಲೆಗಳನ್ನು ನೀಡದ್ದರಿಂದ ಕಳೆದ 54 ದಿನಗಳಿಂದಲೂ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ’ ಎಂದು ಪ್ರತಿಭಟನಾನಿರತ ರೈತರೋರ್ವರು ಸುದ್ದಿಗಾರರಿಗೆ ತಿಳಿಸಿದರು. ಅತ್ತ ತಂಜಾವೂರಿನಲ್ಲಿಯೂ ರೈತರು ಕಾವೇರಿ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದು, ರಸ್ತೆತಡೆಗಳನ್ನು ನಡೆಸಿದ್ದಾರೆ.