ಕೇಂದ್ರದಿಂದ ಕೇರಳದ ನಿರ್ಲಕ್ಷ ಆರೋಪ; ಪಿಣರಾಯಿ ವಿಜಯನ್, ಸಚಿವರಿಂದ ಫೆ.8ರಂದು ದಿಲ್ಲಿಯಲ್ಲಿ ಪ್ರತಿಭಟನೆ
ತಿರುವನಂತಪುರ: ಕೇಂದ್ರ ಸರಕಾರವು ಕೆರಳವನ್ನು ಕಡೆಗಣಿಸುತ್ತಿದೆಯೆಂದು ಆರೋಪಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಸಂಪುಟ ಸಹದ್ಯೋಗಿಗಳು ಫೆಬ್ರವರಿ 8ರಂದು ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಜಂತರ್‌ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೂ ಆಹ್ವಾನ ನೀಡಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಗೂ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೇರಳದ ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟದ ಸಂಚಾಲಕ ಇ.ಪಿ.ಜಯರಾಜನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುಡಿಎಫ್ ಮೈತ್ರಿಕೂಟದ ಸಂಸದರು ಹಾಗೂ ಶಾಸಕರಿಗೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಪ್ರತಿಭಟನೆಯ ದಿನದಂದು ಸಂಜೆ 4ರಿಂದ 6ರವರೆಗೆ ಬೂತ್‌ಮಟ್ಟದಲ್ಲಿ ಮುಖಂಡರು, ಕಾರ್ಯಕರ್ತರು ಮನೆಮನೆಗೆ ತೆರಳಿ ರಾಜ್ಯದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ದಿಲ್ಲಿ ಪ್ರತಿಭಟನೆಯ ಸಂದೇಶವನ್ನು ರಾಜ್ಯದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಲು ಸಮಗ್ರ ಅಭಿಯಾನವೊಂದನ್ನು ನಡೆಸಲಾಗುವುದು ಎಂದದವರು ಹೇಳಿದರು.
ಕೇಂದ್ರದಿಂದ ಕೇರಳದ ನಿರ್ಲಕ್ಷ್ಯದ ಬಗ್ಗೆ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್, ರಾಜ್ಯ ಉಪಪ್ರತಿಪಕ್ಷ ನಾಯಕ ಕೆ.ಪಿ.ಕುನ್ಹಾಲಿಕುಟ್ಟಿ ಅವ ಜೊತೆ ಮುಖ್ಯಮಂತ್ರಿಯವರು ಆನ್‌ಲೈನ್ ಮಾತುಕತೆ ನಡೆಸಿದ ಬಳಿಕ ದಿಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಒಕ್ಕೂಟವು ಕೈಗೊಂಡಿತೆಂದು ಜಯರಾಜನ್ ತಿಳಿಸಿದರು.