ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕದಲ್ಲಿ ಸಂಪ್ರದಾಯ ನಿರ್ಲಕ್ಷಿಸಿದ ಕೇಂದ್ರ ಸರಕಾರ: ಪಿಣರಾಯಿ ವಿಜಯನ್
ತಿರುವನಂತಪುರ: ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕದಲ್ಲಿ ಕೇಂದ್ರ ಸರಕಾರ ಸಂಸತ್‌ನ ಸಂಪ್ರದಾಯವನ್ನು ನಿರ್ಲಕ್ಷಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ.
ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ಸ್ಥಾನವನ್ನು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರಿಗೆ ನಿರಾಕರಿಸಿರುವ ಕುರಿತಂತೆ ಪಿಣರಾಯಿ ವಿಜಯನ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಘ ಪರಿವಾರದ ಮೇಲ್ಜಾತಿಯ ರಾಜಕಾರಣದಿಂದ ಪ್ರಭಾವಿತರಾಗಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
‘‘ಕೇರಳದ ಮಾವೇಲಿಕ್ಕರ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ಅವರಿಗೆ ಹಂಗಾಮಿ ಸಭಾಧ್ಯಕ್ಷರ ಸ್ಥಾನವನ್ನು ನಿರಾಕರಿಸಲು ಕಾರಣವೇನು ಎಂಬುದರ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು. ಸಂಘ ಪರಿವಾರದ ಮೇಲ್ಜಾತಿ ರಾಜಕಾರಣ ಈ ನಿರ್ಧಾರಕ್ಕೆ ಪ್ರೇರಣೆಯಾಗಿದೆ ಎಂಬ ಅನುಮಾನಗಳ ಬಗ್ಗೆ ಬಿಜೆಪಿಯ ಪ್ರತಿಕ್ರಿಯೆ ಏನು?’’ ಎಂದು ಅವರು ಪ್ರಶ್ನಿಸಿದ್ದಾರೆ.
‘‘ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ 7 ಬಾರಿಯ ಸಂಸದ ಹಾಗೂ ಬಿಜೆಡಿಯ ಮಾಜಿ ನಾಯಕ ಭತುೃಹರಿ ಮಹ್ತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಹಿರಿಯ ಸದಸ್ಯರನ್ನು ನೇಮಕ ಮಾಡುವ ಸಂಪ್ರದಾಯವನ್ನು ನಿರ್ಲಕ್ಷಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಸಂಪ್ರದಾಯಗಳನ್ನು ನಿರ್ಲಕ್ಷಿಸುವ ಮೂಲಕ ಬಿಜೆಪಿ ನಾಯಕತ್ವ ಸಂಸದೀಯ ಪ್ರಜಾಪ್ರಭುತ್ವಕ್ಕೆ ಸವಾಲೆಸೆಯಲು ಹಾಗೂ ಅವಮಾನ ಮಾಡಲು ಪ್ರಯತ್ನಿಸಿದೆ. ಬಿಜೆಪಿ ನಾಯಕತ್ವದ ನಿರ್ಧಾರ ಅತ್ಯಂತ ಶೋಚನೀಯ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.