ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದು ಕೇಂದ್ರದ ಆದ್ಯತೆ: ಅಮಿತ್ ಶಾ

Update: 2024-04-15 15:08 GMT

PC : PTI 

ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದ್ದಾರೆ.

ಮಣಿಪುರವನ್ನು ಒಡೆಯಲು ಪ್ರಯತ್ನಿಸುತ್ತಿರುವ ಶಕ್ತಿಗಳು ಹಾಗೂ ಸಂಘಟಿಸುವ ಶಕ್ತಿಗಳ ನಡುವೆ ಈ ಬಾರಿಯ ಲೋಕಸಭಾ ಚುನಾವಣಾ ನಡೆಯಲಿದೆ ಎಂದು ಇಂಫಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ತಿಳಿಸಿದರು.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸಲು ಒಳನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅಮಿತ್ ಶಾ ಹೇಳಿದರು.

‘‘ಮಣಿಪುರದಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ರಾಜ್ಯವನ್ನು ವಿಭಜಿಸದೆ ಶಾಂತಿ ಸ್ಥಾಪಿಸಲು ನರೇಂದ್ರ ಮೋದಿ ಸರಕಾರ ಆದ್ಯತೆ ನೀಡಲಿದೆ’’ ಎಂದು ಅವರು ತಿಳಿಸಿದರು.

ಈಶಾನ್ಯ ರಾಜ್ಯಗಳು ಹಾಗೂ ಮಣಿಪುರದ ಪರಿಸ್ಥಿತಿ ಬದಲಾದರೆ, ಭಾರತದ ಹಣೆಬರಹವೇ ಬದಲಾಗಲಿದೆ. ಆದುದರಿಂದ ಇನ್ನರ್ ಮಣಿಪುರ ಹಾಗೂ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಅಮಿತ್ ಶಾ ಮತದಾರರಲ್ಲಿ ಮನವಿ ಮಾಡಿದರು.

ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡಬೇಕು ಎಂಬ ಮೈತೈ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಇಂಫಾಲದಲ್ಲಿ ಬುಡಕಟ್ಟು ಏಕತಾ ರ‍್ಯಾಲಿ ಆಯೋಜಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಠ 219 ಜನರು ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News