ಜಾತಿಯಾಧಾರಿತ ಸಮೀಕ್ಷೆಯಲ್ಲಿ ತೊಡಕುಗಳನ್ನು ಸೃಷ್ಟಿಸಲು ಕೇಂದ್ರ ಸರಕಾರವೆಂದೂ ಉದ್ದೇಶಿಸಿರಲಿಲ್ಲ: ಅಮಿತ್ ಶಾ
ಹೊಸದಿಲ್ಲಿ: ಜಾತಿಯಾಧಾರಿತ ಸಮೀಕ್ಷೆಯಲ್ಲಿ ತೊಡಕುಗಳನ್ನು ಸೃಷ್ಟಿಸಲು ಕೇಂದ್ರ ಸರಕಾರವೆಂದೂ ಉದ್ದೇಶಿಸಿರಲಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ರವಿವಾರ ಪಾಟ್ನಾದಲ್ಲಿ ಪೂರ್ವ ವಲಯ ಕೌನ್ಸಿಲ್‌ನ 26ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಆಡಳಿತಾರೂಢ ಬಿಜೆಪಿಯು ಬಿಹಾರದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಜಾತಿಯಾಧಾರಿತ ಸಮೀಕ್ಷೆಯ ಪರಿಕಲ್ಪನೆಯನ್ನು ಬೆಂಬಲಿಸಿತ್ತು. ರಾಜ್ಯಪಾಲರು ಸಹ ಮಸೂದೆಯನ್ನು ಅನುಮೋದಿಸಿದ್ದರು ಎಂದು ಹೇಳಿದರು.
ಜಾತಿಯಾಧಾರಿತ ಸಮೀಕ್ಷೆಯಲ್ಲಿ ಕೆಲವು ಸಮಸ್ಯೆಗಳಿದ್ದವು ಎಂದರು.
ಆಗಸ್ಟ್ ಉತ್ತರಾರ್ಧದಲ್ಲಿ ಬಿಹಾರ ಜಾತಿ ಸಮೀಕ್ಷೆಯ ಕುರಿತು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್, ‘ಸಂವಿಧಾನದಡಿ ಇತರ ಯಾವುದೇ ಸಂಸ್ಥೆಯು ಜನಗಣತಿ ಅಥವಾ ಅದನ್ನು ಹೋಲುವ ಯಾವುದೇ ಪ್ರಕ್ರಿಯೆಯನ್ನು ನಡೆಸುವ ಅರ್ಹತೆಯನ್ನು ಹೊಂದಿಲ್ಲ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಒಳಗೊಂಡಿತ್ತು.
ಬಳಿಕ ಅದೇ ದಿನ ಹೊಸ ಅಫಿಡವಿಟ್‌ನಲ್ಲಿ ಸದ್ರಿ ಪ್ಯಾರಾವನ್ನು ಬದಲಿಸಿದ್ದ ಕೇಂದ್ರವು ‘ಇದೊಂದು ಸಾಲು ಅಚಾತುರ್ಯದಿಂದ ನುಸುಳಿಕೊಂಡಿತ್ತು’ ಎಂದು ಸಮಜಾಯಿಷಿ ನೀಡಿತ್ತು. ಆದಾಗ್ಯೂ 1948ರ ಜನಗಣತಿ ಕಾಯ್ದೆಯು ಜನಗಣತಿಯನ್ನು ನಡೆಸಲು ಕೇಂದ್ರ ಸರಕಾರಕ್ಕೆ ಮಾತ್ರ ಅಧಿಕಾರ ನೀಡಿದೆ ಎಂದು ಅದು ಪ್ರತಿಪಾದಿಸಿತ್ತು.
ಈ ಹಂತದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತಿಗಣತಿಗೆ ಕೇಂದ್ರವು ವಿರುದ್ಧವಾಗಿತ್ತು ಎಂಬ ವ್ಯಾಪಕ ಗ್ರಹಿಕೆಯಿದೆ. ಅಂತಿಮವಾಗಿ ರಾಜ್ಯದಲ್ಲಿ ಜಾತಿ ಗಣತಿಯನ್ನು ಪೂರ್ಣಗೊಳಿಸಿದ ಬಿಹಾರ ಸರಕಾರವು ವಿಧಾನಸಭೆಯಲ್ಲಿ ವರದಿಯನ್ನೂ ಮಂಡಿಸಿದೆ. ಒಡಿಶಾ ಮತ್ತು ಜಾರ್ಖಂಡ್‌ನಲ್ಲಿಯೂ ಇಂತಹುದೇ ಸಮೀಕ್ಷೆಗಳು ನಡೆಯುತ್ತಿವೆ.
ಜಾತಿಗಣತಿಯನ್ನು ನಡೆಸಲು ತನಗೆ ಮಾತ್ರ ಅಧಿಕಾರವಿದೆ ಎಂಬ ಕೇಂದ್ರದ ಹಿಂದಿನ ನಿಲುವಿನ ಹಿನ್ನೆಲೆಯಲ್ಲಿ ಶಾ ಅವರ ಹೇಳಿಕೆಗಳು ರಕ್ಷಣಾತ್ಮಕವಾಗಿವೆ ಎಂದು ಅರ್ಥೈಸಿಕೊಳ್ಳಬಹುದು.