'2023ರಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿಂದ ಸಾವು ಸಂಭವಿಸಿಲ್ಲ ಎಂಬ ಕೇಂದ್ರದ ಹೇಳಿಕೆ ಸುಳ್ಳು': ಸಾಮಾಜಿಕ ಹೋರಾಟಗಾರರಿಂದ ವಾಗ್ದಾಳಿ

Update: 2023-07-28 13:59 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಜು.25ರಂದು ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳಂತೆ 2023ರಲ್ಲಿ ದೇಶದಲ್ಲಿ ಒಳಚರಂಡಿಗಳು ಮತ್ತು ಮಲಗುಂಡಿಗಳನ್ನು ಸ್ವಚ್ಛಗೊಳಿಸುವಂತಹ ಅಪಾಯಕಾರಿ ಸಂದರ್ಭಗಳಲ್ಲಿ ಕೇವಲ ಒಂಭತ್ತು ‘ಸ್ವಚ್ಛತಾ ಕಾರ್ಮಿಕರ’ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ (ದೈಹಿಕವಾಗಿ ಮಲಗುಂಡಿ ಸ್ವಚ್ಛತೆ)ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದೂ ಸರಕಾರದ ದತ್ತಾಂಶಗಳು ಹೇಳುತ್ತಿದ್ದು, ಇದು ದೇಶದಲ್ಲಿ ಮಲ ಹೊರುವ ಪದ್ಧತಿಯ ನಿರ್ಮೂಲನಕ್ಕಾಗಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನ (ಎಸ್ಕೆಎ) ವರದಿ ಮಾಡಿರುವ ಮತ್ತು ದಾಖಲಿಸಿರುವ ಸಾವುಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು thenewsminute.com ವರದಿ ಮಾಡಿದೆ.

ಮಂಗಳವಾರ ಲೋಕಸಭೆಯಲ್ಲಿ ಸಂಸದರಾದ ಡಾ.ಎ.ಚೆಲ್ಲಕುಮಾರ (ಕೃಷ್ಣಗಿರಿ),ಕೆ.ಸುಧಾಕರನ್ (ಕಣ್ಣೂರು) ಮತ್ತು ಡಾ.ಅಮರ ಸಿಂಗ್ (ಫತೇಗಡ ಸಾಹಿಬ್) ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಅವರು ದತ್ತಾಂಶಗಳನ್ನು ಮಂಡಿಸಿದ್ದರು.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿರ್ಮೂಲನಕ್ಕಾಗಿ ಕಳೆದ ಐದು ವರ್ಷಗಳಲ್ಲಿ ಮಾಡಲಾದ ಹಂಚಿಕೆ,ಕಳೆದ ಐದು ವರ್ಷಗಳಲ್ಲಿ ಒಳಚರಂಡಿಗಳಲ್ಲಿ ಸಾವನ್ನಪ್ಪಿದ ಸ್ವಚ್ಛತಾ ಕಾರ್ಮಿಕರ ಒಟ್ಟು ಸಂಖ್ಯೆ ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ತೊಡೆದುಹಾಕಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸರಕಾರವು ಯೋಜಿಸಿದೆಯೇ ಎನ್ನುವುದು ಸೇರಿದಂತೆ ಏಳು ಪ್ರಶ್ನೆಗಳನ್ನು ಈ ಸಂಸದರು ಕೇಳಿದ್ದರು.

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ಕಾರ್ಯವು ತಾಂತ್ರಿಕವಾಗಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವರ್ಗದಡಿ ಬರುತ್ತದಾದರೂ ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ,2013ರಲ್ಲಿ ಒದಗಿಸಿರುವ ಸಂಕುಚಿತ ವ್ಯಾಖ್ಯೆಯಿಂದಾಗಿ ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಕಾಯ್ದೆಯ ಕಲಂ 2(ಜಿ) ಪ್ರಕಾರ ‘ಮ್ಯಾನ್ಯುವಲ್ ಸ್ಕ್ಯಾವೆಂಜರ್ ’ಅನ್ನು ಅಸ್ವಚ್ಛ ಶೌಚಾಲಯಗಳು,ಮಾನವ ಮಲ ವಿಸರ್ಜನೆಯನ್ನು ವಿಲೇವಾರಿ ಮಾಡುವ ಯಾವುದೇ ತೆರೆದ ಚರಂಡಿ ಅಥವಾ ಹೊಂಡ,ರೈಲ್ವೆ ಹಳಿಗಳು ಅಥವಾ ಇಂತಹ ಯಾವುದೇ ಸ್ಥಳಗಳು ಅಥವಾ ಆವರಣಗಳಿಂದ ಮಾನವ ಮಲವನ್ನು ಯಾವುದೇ ರೀತಿಯಲ್ಲಿ ಕೈಯಿಂದ ಸ್ವಚ್ಛಗೊಳಿಸುವ,ಸಾಗಿಸುವ,ವಿಲೇವಾರಿ ಮಾಡುವ ಅಥವಾ ನಿರ್ವಹಿಸುವ ವ್ಯಕ್ತಿ ಎಂದು ವ್ಯಾಖ್ಯಾನಿಸಲಾಗಿದೆ. ಇದು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ನ್ನು ಒಳಗೊಂಡಿಲ್ಲ.

ಕಾಯ್ದೆಯು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ನ ‘ಅಪಾಯಕಾರಿ ಸ್ವಚ್ಛತೆ’ಯನ್ನು ಉದ್ಯೋಗದಾತರು ಯಾವುದೇ ಸುರಕ್ಷತಾ ಮತ್ತು ಇತರ ಸ್ವಚ್ಛಗೊಳಿಸುವ ಸಾಧನಗಳನ್ನು ಒದಗಿಸದೆ ಮತ್ತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ಕಾರ್ಮಿಕರಿಂದ ದೈಹಿಕವಾಗಿ ಸ್ವಚ್ಛಗೊಳಿಸುವುದು ಎಂದು ಪ್ರತ್ಯೇಕವಾಗಿ ವ್ಯಾಖ್ಯಾನಿಸಿದೆ.

ಲೋಕಸಭೆಯಲ್ಲಿ ಸಚಿವರ ಉತ್ತರದ ಪ್ರಕಾರ ಈ ವರ್ಷ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತಹ ಅಪಾಯಕಾರಿ ಸಂದರ್ಭಗಳಲ್ಲಿ ಕೇವಲ ಒಂಭತ್ತು ‘ಸ್ವಚ್ಛತಾ ಕಾರ್ಮಿಕರ’ ಸಾವುಗಳು ಸಂಭವಿಸಿವೆ. ಒದಗಿಸಲಾಗಿರುವ ದತ್ತಾಂಶಗಳಂತೆ 2018-2023ರ ನಡುವೆ ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ 339 ‘ಸ್ವಚ್ಛತಾ ಕಾರ್ಮಿಕರು’ ಜೀವಗಳನ್ನು ಕಳೆದುಕೊಂಡಿದ್ದಾರೆ. 2023ರಲ್ಲಿ (ನಿರ್ದಿಷ್ಟ ತಿಂಗಳನ್ನು ಉಲ್ಲೇಖಿಸಿಲ್ಲ) ಮಹಾರಾಷ್ಟ್ರದಲ್ಲಿ 5,ಗುಜರಾತಿನಲ್ಲಿ 3 ಮತ್ತು ಜಾರ್ಖಂಡ್ನಲ್ಲಿ 1:ಹೀಗೆ ಮೂರು ರಾಜ್ಯಗಳಲ್ಲಿ ಒಂಭತ್ತು ಸಾವುಗಳು ದಾಖಲಾಗಿವೆ.

ಭಾರತದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳ ವಿವರಗಳು ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳನ್ನು ನೇಮಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿದೆಯೇ ಎನ್ನುವುದನ್ನು ಕೋರಿ ಸಂಸದರಾದ ಪಿ.ರವೀಂದ್ರನಾಥ ಮತ್ತು ವರುಣ್ ಗಾಂಧಿ ಅವರು ಎತ್ತಿದ್ದ ಪ್ರಶ್ನೆಗಳಿಗೂ ಅಠಾವಳೆ ಉತ್ತರಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ವ್ಯಕ್ತಿಗಳು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನಲ್ಲಿ ತೊಡಗಿಕೊಂಡಿರುವ ವರದಿಗಳಿಲ್ಲ ಮತ್ತು ಇಂತಹ ಪ್ರಕರಣಗಳು ದಾಖಲಾದ ಬಗ್ಗೆ ಯಾವುದೇ ವರದಿಗಳನ್ನು ಸ್ವೀಕರಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ದತ್ತಾಂಶವನ್ನು ಕೀಳಂದಾಜಿಲಾಗಿದೆ:ಎಸ್ಕೆಎ

ಸಾಮಾಜಿಕ ಹೋರಾಟಗಾರ ಮತ್ತು ಎಸ್ಕೆಎ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್ ಅವರ ಪ್ರಕಾರ,ಸರಕಾರವು ಒದಗಿಸಿರುವ ದತ್ತಾಂಶಗಳು ಭಾರತದಲ್ಲಿ ಸಂಭವಿಸಿರುವ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಸಾವುಗಳ ಸಂಖ್ಯೆಯನ್ನು ಸಂಪೂರ್ಣವಾಗಿ ಕೀಳಂದಾಜಿಸಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಎಸ್ಕೆಎ ದಾಖಲೆಗಳ ಪ್ರಕಾರ ಈ ವರ್ಷ ದೇಶಾದ್ಯಂತ ಕನಿಷ್ಠ 57 ಇಂತಹ ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು.

ಎಸ್ಕೆಎ ಒದಗಿಸಿರುವ ಮಾಹಿತಿಗಳ ಪ್ರಕಾರ ಗರಿಷ್ಠ ಸಂಖ್ಯೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಸಾವುಗಳು ಮಹಾರಾಷ್ಟ್ರದಲ್ಲಿ (10) ಸಂಭವಿಸಿವೆ.

ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಆರು,ಕರ್ನಾಟಕದಲ್ಲಿ ಎರಡು,ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ಒಂದು ಇಂತಹ ಸಾವುಗಳು ಸಂಭವಿಸಿವೆ. ಕೇರಳದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಸಾವುಗಳ ಕುರಿತು ಸರಕಾರವು ಮತ್ತೊಮ್ಮೆ ಸುಳ್ಳು ಹೇಳಿರುವುದು ದುರದೃಷ್ಟಕರ. ಸರಕಾರವು ಒದಗಿಸಿರುವ ಕಳೆದ ಐದು ವರ್ಷಗಳಲ್ಲಿಯ ಸಾವುಗಳ ಸಂಖ್ಯೆ ವಾಸ್ತವಿಕವಲ್ಲ ಮತ್ತು ಸರಕಾರದ ನಿರಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್ಕೆಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News