ಸರಕಾರದ ಹೊರಗಿದ್ದೇ ಮೋದಿಯನ್ನು ನಿಯಂತ್ರಿಸಲಿದ್ದಾರಾ ಚಂದ್ರಬಾಬು ನಾಯ್ಡು?

Update: 2024-06-08 11:09 GMT

ಚಂದ್ರಬಾಬು ನಾಯ್ಡು (PTI)

ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಸುಗಮವಾಗಿದೆ. ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ರವಿವಾರ ಸಂಜೆ 6 ಗಂಟೆಗೆ ತಮ್ಮ ನೂತನ ಸಚಿವ ಸಂಪುಟದ ಸದಸ್ಯರ ಜೊತೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಮಂತ್ರಿ ಪದವಿಯ ಹಿಂದೆ ಹೋಗದೆ ಇಡೀ ಸರಕಾರದ ಮೇಲೆ ನಿಯಂತ್ರಣ ಸಾಧಿಸುವ ಆಟ ಆಡುವ ಸುಳಿವು ಕೊಟ್ಟಿದ್ದಾರೆ ಚಂದ್ರಬಾಬು ನಾಯ್ಡು. ಹೊಸ ಎನ್ ಡಿ ಎ ಸರಕಾರದಲ್ಲಿ 240 ಸೀಟಿರುವ ಬಿಜೆಪಿಗಿಂತ ಹೆಚ್ಚು ಪ್ರಭಾವಿಯಾಗಿ ನಿತೀಶ್ ಕುಮಾರ್ ಹಾಗು ಚಂದ್ರಬಾಬು ನಾಯ್ಡು ಅವರು ಕಾಣುತ್ತಿದ್ದಾರೆ.

ಅದರಲ್ಲೂ ನಾಯ್ಡು ಅವರ ಪವರ್ ಇನ್ನೂ ಸ್ವಾಲ್ಪ ಜಾಸ್ತಿನೇ ಕಾಣ್ತಾ ಇದೆ. ಅವರು ಸ್ಪೀಕರ್ ಸಹಿತ ಮೂರ್ನಾಲ್ಕು ಕ್ಯಾಬಿನೆಟ್ ಹುದ್ದೆ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ಪ್ಯಾಕೇಜ್ ಕೇಳ್ತಾ ಇದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.

ಆದರೆ ಶನಿವಾರ ಬೆಳಗ್ಗಿನಿಂದ ಬರುತ್ತಿರುವ ಸುದ್ದಿಗಳು ಬೇರೇನೇ ಸುಳಿವು ಕೊಡುತ್ತಿವೆ. ಸ್ಪೀಕರ್, ಸಂಪುಟ ಸ್ಥಾನಮಾನ ಪಡಕೊಂಡರೆ ಅಲ್ಲಿಗೆ ಒಂದು ಹಂತದಲ್ಲಿ ಬಿಜೆಪಿ ಜೊತೆ ರಾಜಿ ಆದ ಹಾಗೆ ಆಗೋ ಸಾಧ್ಯತೆ ಇರುವುದರಿಂದ ಈ ಹಿಂದೆ ವಾಜಪೇಯಿ ಸರಕಾರವನ್ನು ಆಂಧ್ರದಿಂದಲೇ ನಿಯಂತ್ರಿಸಿದ ಹಾಗೆ ಮೋದಿ ಸರಕಾರದಲ್ಲೂ ಮಾಡುವ ಐಡಿಯಾ ಚಂದ್ರಬಾಬು ನಾಯ್ಡು ಅವರದ್ದು ಎಂಬ ಸುದ್ದಿ ಅದು.

ಸದ್ಯಕ್ಕೆ ತಮ್ಮ ಸಂಸದರಿಗೆ ಯಾವುದೇ ಪ್ರಭಾವೀ ಹುದ್ದೆಗೆ ಹಠ ಹಿಡಿಯದೇ ಇರೋದು, ಕೊಟ್ಟಿದ್ದನ್ನು ತೆಗೆದುಕೊಳ್ಳುವುದು. ಅಥವಾ ನಮಗೆ ಯಾವ ಹುದ್ದೇನೂ ಬೇಡ, ನಾವು ಹೊರಗಿಂದ ಬೆಂಬಲ ಕೊಡ್ತೀವಿ ಅನ್ನೋದು ನಾಯ್ಡು ಐಡಿಯಾ ಎಂದು ಹೇಳಲಾಗುತ್ತಿದೆ.

ವಾಜಪೇಯಿ ಸರಕಾರದಲ್ಲೂ ಅವರು ಮಾಡಿದ್ದು ಇದನ್ನೇ. ಸ್ಪೀಕರ್ ಹುದ್ದೆಯನ್ನೇ ಆಗ ತೀರಾ ಒತ್ತಡ ಹಾಕಿದ್ದಕ್ಕೆ ಕೊನೇ ಗಳಿಗೆಯಲ್ಲಿ ಪಡೆದುಕೊಂಡಿದ್ದರು. ಅವರ ಪಕ್ಷದ ಜಿ ಎಂ ಸಿ ಬಾಲಯೋಗಿ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಲು ಹರಸಾಹಸ ಪಟ್ಟಿದ್ದರು. ಆದರೆ ವಾಜಪೇಯಿ ಸರಕಾರದಲ್ಲಿ ನಾಯ್ಡು ಏನು ಹೇಳಿದರೂ ನಡೆಯುತ್ತಿತ್ತು. ರಾಷ್ಟ್ರಪತಿ ಹುದ್ದೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಆಯ್ಕೆಯಲ್ಲಿ ಚಂದ್ರಬಾಬು ನಾಯ್ಡು ನಿರ್ಣಾಯಕ ಪಾತ್ರ ವಹಿಸಿದ್ದರು.

ಈಗಲೂ ಅದೇ ಸ್ಟ್ರಾಟಜಿ ಅನುಸರಿಸೋ ಐಡಿಯಾ ನಾಯ್ಡು ಅವರದ್ದು ಎನ್ನಲಾಗಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಯಾವುದೇ ಹುದ್ದೆ ತೆಗೆದುಕೊಳ್ಳದೆ ಹೊರಗಿನಿಂದ ಬೆಂಬಲ ಕೊಟ್ಟರೆ ಯಾವಾಗ ಬೇಕಾದರೂ ಬೆಂಬಲ ವಾಪಸ್ ಪಡೆಯಬಹುದೆಂಬ ಭಯ ಮೋದಿ, ಶಾ ಹಾಗು ಬಿಜೆಪಿಯಲ್ಲಿರುತ್ತೆ. ಅದನ್ನು ತನಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು. ತಾನು ಮುಖ್ಯಮಂತ್ರಿ ಆಗಲಿರುವ ಆಂಧ್ರಕ್ಕೆ ಬೇಕಾದ ಹಾಗೆ ಕೇಂದ್ರದಿಂದ ನೆರವು, ಸಹಕಾರ ಪಡೆದುಕೊಳ್ಬಳಬಹುದು.

ಇನ್ನೊಂದು ಮುಖ್ಯ ಕಾರಣ ಮಿತ್ರಪಕಕ್ಷಗಳ ನಾಯಕರನ್ನು ಸೆಳೆಯುವ ಬಿಜೆಪಿ ತಂತ್ರಗಾರಿಕೆ. ತನ್ನ ಪಕ್ಷದಿಂದ ಯಾರನ್ನಾದರೂ ಕೇಂದ್ರ ಸಚಿವ ಮಾಡಿದ ಕೂಡಲೇ ಅವರು ದಿಲ್ಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಆಪ್ತರಾಗ್ತಾರೆ. ಬಿಜೆಪಿ ಜೊತೆ ಅವರ ಒಡನಾಟ ಹೆಚ್ಚಾಗುತ್ತೆ. ಕ್ರಮೇಣ ಅದು ತನಗೆ ಹಾಗು ತನ್ನ ಪಕ್ಷಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚು ಎಂಬ ಭಯ ನಾಯ್ಡು ಅವರಿಗಿದೆ.

ನಾಯ್ಡು ರಾಜಕೀಯದ ಹಳೆ ಹುಲಿ. ರಾಷ್ಟ್ರಮಟ್ಟದ ಮೈತ್ರಿ ರಾಜಕಾರಣದಲ್ಲೂ ಪಳಗಿದವರು. ಮೋದಿ ಶಾ ಆಟವನ್ನೂ ಬಹಳ ಹತ್ತಿರದಿಂದ ಕಂಡವರು. ಹಾಗಾಗಿ ಈ ಬಾರಿ ಬಹಳ ತ್ರಾಸದಿಂದ ಆಂಧ್ರದಲ್ಲಿ ಮತ್ತೆ ಅಧಿಕಾರಕ್ಕೆ ಏರಿರುವ ಅವರು ಅಧಿಕಾರ ಹಾಗು ಪಕ್ಷದ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಲ್ಕುಲ್ ತಯಾರಿಲ್ಲ.

ತೀರಾ ಬಿಜೆಪಿ ಹಾಗು ಮೋದಿ ಒತ್ತಾಯ ಮಾಡಿದ್ರೆ ಅವರು ಕೊಟ್ಟ ಸಾಧಾರಣ ಇಲಾಖೆಗೆ ತನ್ನ ತೀರಾ ನಂಬಿಕಸ್ತ ಒಂದಿಬ್ಬರು ಸಂಸದರನ್ನು ಕಳಿಸುವ ಇರಾದೆ ನಾಯ್ಡು ಅವರಿಗಿದೆ ಎಂದು ದಕ್ಷಿಣ ಭಾರತದ ಮಾಧ್ಯಮಗಳು ಟಿಡಿಪಿ ಸಂಸದರನ್ನೇ ಉಲ್ಲೇಖಿಸಿ ವರದಿ ಮಾಡಿದ್ದಾರೆ.

ಸರಕಾರದಿಂದ ತನ್ನ ಸಂಸದರನ್ನು ದೂರ ಇಡುವುದು, ಆದರೆ ತಾನು ಮಾತ್ರ ಆಂಧ್ರದಲ್ಲಿದ್ದರೂ ದಿಲ್ಲಿ ಸರಕಾರವನ್ನು ನಿಯಂತ್ರಿಸೋದು - ಇವು ಚಂದ್ರಬಾಬು ನಾಯ್ಡು ಅವರ ದೂರಾಲೋಚನೆ ಎಂದು ಹೇಳಲಾಗುತ್ತಿದೆ.

ಸರಕಾರದ ಭಾಗವಾಗಿ ಇಲ್ಲದಿದ್ದರೆ ಬಿಜೆಪಿಯನ್ನು ಬೇಕಾದ ಹಾಗೆ ನಿಯಂತ್ರಿಸಬಹುದು, ಆಂಧ್ರಕ್ಕೆ ಬೇಕಿದ್ದನ್ನೆಲ್ಲ ಕೇಳಿ ಪಡೆದುಕೊಳ್ಳಬಹದು, ಯಾವಾಗ ಬೆಂಬಲ ವಾಪಾಸ್ ಪಡಿಯುತ್ತಾರೋ ಎಂಬ ಭಯದಲ್ಲಿ ಬಿಜೆಪಿ ಯಾವುದಕ್ಕೂ ಇಲ್ಲ ಅನ್ನುವುದಿಲ್ಲ ಎಂಬ ಧೈರ್ಯ ನಾಯ್ಡು ಅವರಿಗಿದೆ. ಯಾಕಂದ್ರೆ ಸದ್ಯಕ್ಕೆ ನಿತೀಶ್ ಅವರನ್ನೂ ಬಿಟ್ಟು ಎನ್ ಡಿ ಎ ಸರಕಾರ ನಡೀಬಹುದು, ಆದರೆ ನಾಯ್ಡು ಅನ್ನು ಬಿಡುವ ಹಾಗೇ ಇಲ್ಲ.

ಬಿಜೆಪಿಯ ಈ ಅನಿವಾರ್ಯತೆಯನ್ನು ಚೆನ್ನಾಗಿಯೇ ಬಳಸಿಕೊಂಡು ಆಂಧ್ರ ಪ್ರದೇಶದಲ್ಲಿ ತನ್ನ ಹಲವು ಕನಸುಗಳನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ ಚಂದ್ರಬಾಬು ನಾಯ್ಡು. ಅಮರಾವತಿಯನ್ನು ತನ್ನ ಬಯಕೆಗೆ ತಕ್ಕಂತೆ ಹೊಸ ರಾಜಧಾನಿಯಾಗಿ ರೂಪಿಸುವುದು, ಕೆಲವು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಅನುದಾನ ಪಡೆಯೋದು - ಇವುಗಳಿಗೆಲ್ಲ ನಾಯ್ಡುಗೆ ದೊಡ್ಡ ಮಟ್ಟದ ಅನುದಾನದ ಅಗತ್ಯವಿದೆ.

ದಿಲ್ಲಿಯಲ್ಲಿ ತನ್ನ ಸಚಿವರು ಇರುವುದಕ್ಕಿಂತ ಆಂಧ್ರದಲ್ಲಿ ತನಗೆ ಬೇಕಾದಂತೆ ಸರಕಾರ ನಡೆಸುವುದು, ತನ್ನ ಐಡಿಯಾಗಳನ್ನು ಜಾರಿ ಮಾಡುವುದು, ಅದಕ್ಕೆ ದಿಲ್ಲಿಯಿಂದ ಭರಪೂರ ಸಹಕಾರ ಪಡೆಯೋದು ನಾಯ್ಡು ಯೋಚನೆ. ಇದು ಮೋದಿ, ಶಾ ಹಾಗು ಬಿಜೆಪಿ ಪಾಲಿಗಂತೂ ಪ್ರತಿದಿನದ ಸವಾಲು ಆಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News