"ಹಾಲಿನಿಂದ ನೊಣ ಬಿಸಾಡಿದ ಹಾಗೆ ಬಿಸಾಡುತ್ತಾರೆ": ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಪೊಲೀಸ್ ಅಧಿಕಾರಿಗೆ ಸಂಸದ ಚಂದ್ರಶೇಖರ್ ಆಝಾದ್ ಎಚ್ಚರಿಕೆ

Update: 2025-03-18 18:09 IST
"ಹಾಲಿನಿಂದ ನೊಣ ಬಿಸಾಡಿದ ಹಾಗೆ ಬಿಸಾಡುತ್ತಾರೆ": ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಪೊಲೀಸ್ ಅಧಿಕಾರಿಗೆ ಸಂಸದ ಚಂದ್ರಶೇಖರ್ ಆಝಾದ್ ಎಚ್ಚರಿಕೆ

ಚಂದ್ರಶೇಖರ್ ಆಝಾದ್ (File Photo: PTI)

  • whatsapp icon

ಲಕ್ನೋ: ಹೋಳಿಯ ಬಣ್ಣದಿಂದ ಸಮಸ್ಯೆಯಾಗುವ ಮುಸ್ಲಿಮರು ಆ ದಿನ ಮನೆಯಲ್ಲೇ ಇರಬಹುದು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಉತ್ತರ ಪ್ರದೇಶದ ಸಂಭಲ್ ನ ಸರ್ಕಲ್ ಇನ್ಸ್ಪೆಕ್ಟರ್ ಅನುಜ್ ಚೌಧರಿಗೆ ತಿರುಗೇಟು ನೀಡಿರುವ ಸಂಸದ ಚಂದ್ರಶೇಖರ್ ಆಝಾದ್, ಈಗ ಈ ಸರಕಾರ ಇದೆ. ನಾಳೆ ಸರಕಾರ ಬದಲಾಗಬಹುದು. ಆಗ ಇಂತಹವರನ್ನು ಹಾಲಿನಿಂದ ನೊಣವನ್ನು ತೆಗೆದು ಬಿಸಾಡಿದ ಹಾಗೆ ಬಿಸಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾರ್ಚ್ 17 ರಂದು ಈ ಬಗ್ಗೆ ಮಾತಾಡಿರುವ ದಲಿತ ನಾಯಕ, ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಝಾದ್, ಪೊಲೀಸ್ ಅಧಿಕಾರಿಗಳು ರಾಜಕೀಯದಲ್ಲಿ ಇಳಿಯಬಾರದು. ರಾಜಕೀಯ ಪಕ್ಷಗಳ ಜೊತೆ ಸೇರಬಾರದು. ಈಗ ಈ ಸರಕಾರ ಇದೆ. ನಾಳೆ ಸರಕಾರ ಬದಲಾಗಬಹುದು. ಆಗ ಇಂತಹವರನ್ನು ಹಾಲಿನಿಂದ ನೊಣವನ್ನು ತೆಗೆದು ಬಿಸಾಡಿದ ಹಾಗೆ ಬಿಸಾಡುತ್ತಾರೆ. ಆಗ ಜನರೆದುರು ಈ ಅಧಿಕಾರಿ ರಾಜಕಾರಣಿಯಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ.

ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ, ಶುಕ್ರವಾರದ ಜುಮಾ ನಮಾಝ್ ಪ್ರತಿ ವಾರ ಬರುತ್ತೆ. ಮುಸಲ್ಮಾನರು ಪ್ರತಿ ವಾರ ಜುಮಾ ನಮಾಝ್ ಗೆ ಕಾಯುವ ಹಾಗೇ ಹಿಂದೂಗಳು ವರ್ಷವಿಡೀ ಹೋಳಿಗಾಗಿ ಕಾಯುತ್ತಾರೆ, ನಿಮಗೆ ಹೋಳಿ ಬಣ್ಣದಿಂದ ಏನಾದರೂ ಸಮಸ್ಯೆಯಿದ್ದರೆ ಅವತ್ತು ಮನೆಯಿಂದ ಹೊರಬರಬೇಡಿ ಎಂದು ಅನುಜ್ ಚೌಧರಿ ಹೇಳಿದ್ದರು.

ಇನ್ನೊಂದು ಸಂದರ್ಭದಲ್ಲಿ ಅದೇ ಧಾಟಿಯಲ್ಲಿ ಮಾತಾಡಿದ್ದ ಅನುಜ್ ಚೌಧರಿ "ಹೋಳಿಯ ದಿನ ಬಣ್ಣದಲ್ಲಿ ಆಡುವ ಮನಸ್ಸಿದ್ದವರು ಹೊರಬನ್ನಿ, ಬಣ್ಣ ಮೈಮೇಲೆ ಬೀಳಿಸಿಕೊಳ್ಳುವ ಸಾಮರ್ಥ್ಯ ಇದ್ದವರು ಹೊರಗೆ ಬನ್ನಿ, ಈ ಎರಡೂ ಆಗದವರು ಅವತ್ತು ಮನೆಯಿಂದ ಹೊರಬರಬೇಡಿ, ಶುಕ್ರವಾರದ ಜುಮಾ ನಮಾಝ್ ಅನ್ನು ಆವತ್ತು ಮನೆಯಲ್ಲೇ ಮಾಡಿ, ಕೊರೊನ ಕಾಲದಲ್ಲೂ ಮನೆಯಲ್ಲೇ ನಮಾಝ್ ಮಾಡಿಲ್ವಾ ? ಮಸೀದಿಯಲ್ಲೂ ವಿಗ್ರಹ ಇರೋದಿಲ್ಲ ಎಂದಾದರೆ ಮತ್ತೆ ಮನೆಯಲ್ಲೇ ನಮಾಝ್ ಮಾಡಲು ಏನು ಸಮಸ್ಯೆ ? ಅಲ್ಲೂ ವಿಗ್ರಹ ಇರೋದಿಲ್ಲ ಹಾಗಾಗಿ ಮನೆಯಲ್ಲೇ ನಮಾಝ್ ಮಾಡಬಹುದು ಎಂದು ಹೇಳಿದ್ದರು.

ಅನುಜ್ ಚೌಧರಿಯ ಈ ಹೇಳಿಕೆಯಿಂದ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ವಿಪಕ್ಷಗಳು ಈ ಹೇಳಿಕೆಯನ್ನು ಖಂಡಿಸಿದ್ದವು. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರಂತೂ ಇನ್ಸ್ ಪೆಕ್ಟರ್ ರನ್ನು ಲಫನ್ಗ ಎಂದು ಝಾಡಿಸಿದ್ದರು.

ಇನ್ಸ್ ಪೆಕ್ಟರ್ ಅನುಜ್ ಚೌಧರಿಯ ಹೇಳಿಕೆಗೆ ಸಿಎಂ ಆದಿತ್ಯನಾಥ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಅವರು ಹೇಳಿದ್ದು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಅವರು ಹೇಳಿದ್ದು ಸತ್ಯ. ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತೆ. ಶುಕ್ರವಾರದ ಜುಮಾ ನಮಾಝ್ ಪ್ರತಿ ವಾರ ಬರುತ್ತೆ. ಅದನ್ನು ಬೇಕಿದ್ರೆ ಮಾಡದೆಯೂ ಇರಬಹುದು. ಮಾಡಲೇ ಬೇಕಿದ್ದರೆ ಮನೆಯಲ್ಲೇ ನಮಾಝ್ ಮಾಡಬಹುದು. ಮಸೀದಿಗೆ ಹೋಗಲೇ ಬೇಕಿದ್ದರೆ ಹೋಳಿಯ ಬಣ್ಣದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಇನ್ಸ್ ಪೆಕ್ಟರ್ ಮೊದಲು ಪೈಲ್ವಾನ್ ಆಗಿದ್ದರು, ಅರ್ಜುನ ಪ್ರಶಸ್ತಿ ಪುರಸ್ಕೃತರು, ಒಲಿಂಪಿಯನ್ ಆಗಿದ್ದವರು, ಪೈಲ್ವಾನರ ಹಾಗೆ ಮಾತಾಡಿದ್ದಾರೆ, ಆದರೆ ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು.

ಈ ನಡುವೆ ಅನುಜ್ ಚೌಧರಿಯ ಹೇಳಿಕೆ ಬಳಿಕ ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ತಂದೆ ಅಳಲು ತೋಡಿಕೊಂಡಿದ್ದರು. ಆದರೆ ಜಿಲ್ಲಾ ಎಸ್ಪಿ ಅಂತಹ ಯಾವುದೇ ಸಮಸ್ಯೆ ಇಲ್ಲ, ಎಲ್ಲ ಅಧಿಕಾರಿಗಳೂ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News