ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಟಿವಿ ನಿರೂಪಕಿಯ ಮೇಲೆ ಅತ್ಯಾಚಾರವೆಸಗಿದ ಅರ್ಚಕ: ಆರೋಪ

Update: 2024-05-17 15:12 GMT

ಸಾಂದರ್ಭಿಕ ಚಿತ್ರ | PC : PTI 

ಚೆನ್ನೈ: ನಿದ್ರೆ ಮಾತ್ರೆ ಬೆರೆಸಿದ ತೀರ್ಥ ಕುಡಿಸಿ ನಗರದ ಪ್ರಸಿದ್ಧ ದೇವಾಲಯವೊಂದರ ಅರ್ಚಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಖಾಸಗಿ ಟಿವಿಯೊಂದರ ನಿರೂಪಕಿಯು ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಸಾಲಿಗ್ರಾಮಂನ 30 ವರ್ಷದ ದಿವ್ಯ (ಹೆಸರು ಬದಲಿಸಲಾಗಿದೆ) ಘಟನೆಯ ಸಂತ್ರಸ್ತೆಯಾಗಿದ್ದು, ಆಕೆ ತನ್ನ ದೂರಿನಲ್ಲಿ ನಾನು ಆಧ್ಯಾತ್ಮಿಕ ಶ್ರದ್ಧೆಯುಳ್ಳ ಮಹಿಳೆಯಾಗಿದ್ದು, ಚೆನ್ನೈನ ಪ್ಯಾರಿ ಕಾರ್ನರ್ ನಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ನಿತ್ಯ ಭೇಟಿ ನೀಡುತ್ತಿದ್ದೆ ಹಾಗೂ ಈ ಸಂದರ್ಭದಲ್ಲಿ ನನಗೆ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಮುನುಸ್ವಾಮಿಯ ಪರಿಚಯವಾಯಿತು ಎಂದು ಹೇಳಿದ್ದಾರೆ.

ಇದಾದ ನಂತರ, ದೇವಾಲಯದಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮಗಳ ಕುರಿತು ಕಾರ್ತಿಕ್ ಮುನುಸ್ವಾಮಿ ಆಕೆಗೆ ವಾಟ್ಸ್ ಆ್ಯಪ್ ನಲ್ಲಿ ಸಂದೇಶ ರವಾನಿಸುತ್ತಿದ್ದ ಎಂದು ಹೇಳಲಾಗಿದೆ. ಅವರಿಬ್ಬರ ನಡುವೆ ಗೆಳೆತನವೇರ್ಪಟ್ಟ ನಂತರ, ಆಕೆ ದೇವಾಲಯಕ್ಕೆ ಭೇಟಿ ನೀಡಿದಾಗಲೆಲ್ಲ ಆಕೆಯನ್ನು ಗರ್ಭಗುಡಿಗೆ ಕರೆದೊಯ್ಯುತ್ತಿದ್ದ ಕಾರ್ತಿಕ್ ಮುನುಸ್ವಾಮಿ, ಆಕೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡುತ್ತಿದ್ದ ಎಂದೂ ದೂರಿನಲ್ಲಿ ಹೇಳಲಾಗಿದೆ.

ದಿನ ಕಳೆದಂತೆ, ಒಂದು ದಿನ ದಾರಿ ಮಧ್ಯೆ ಮನೆಗೆ ಬಿಡುವುದಾಗಿ ಹೇಳಿ ನನ್ನನ್ನು ಕಾರ್ತಿಕ್ ಮುನುಸ್ವಾಮಿ ತನ್ನ ಕಾರ್ ನಲ್ಲಿ ಕರೆದೊಯ್ದ. ಆದರೆ, ಆತ ನನಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥವನ್ನು ನೀಡಿದ. ಅದನ್ನು ಕುಡಿದು ಪ್ರಜ್ಞಾಹೀನಳಾದ ನನ್ನ ಮೇಲೆ ಆತ ಅತ್ಯಾಚಾರ ನಡೆಸಿದ. ನಂತರ, ದೇವಾಲಯದಲ್ಲಿ ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಅಂದಿನಿಂದ ಕಾರ್ತಿಕ್ ಮುನುಸ್ವಾಮಿ ಪದೇ ಪದೇ ನನ್ನ ಮನೆಗೆ ಭೇಟಿ ನೀಡಿದ್ದು, ನಾನು ಗರ್ಭಿಣಿಯಾದೆ. ಆದರೆ, ಸುಳ್ಳು ನೆಪ ಹೇಳಿ ನನ್ನನ್ನು ವಡಾಪಳನಿಯಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ನನಗೆ ಗರ್ಭಪಾತ ಮಾಡಿಸಲಾಯಿತು. ಇದಾದ ನಂತರ ನನ್ನನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಆತ ನನ್ನನ್ನು ಒತ್ತಾಯಿಸಿದ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ಖಾಸಗಿ ಟಿವಿಯ ನಿರೂಪಕಿಯು ದಾಖಲಿಸಿರುವ ದೂರನ್ನು ಆಧರಿಸಿ ವಿರುಗಂಬಾಕ್ಕಂ ಮಹಿಳಾ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರುದಾರ ಮಹಿಳೆಯೊಂದಿಗೆ ದೇವಾಲಯದ ಅರ್ಚಕ ಕಾರ್ತಿಕ್ ಮುನುಸ್ವಾಮಿ ಇರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೊಗಳು ಪತ್ತೆಯಾಗಿವೆ. ಕಾರ್ತಿಕ್ ಮುನುಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಆರು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ದೂರುದಾರ ಮಹಿಳೆಯು ತನ್ನ ಎಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿದ ನಂತರ, ಚೆನ್ನೈನ ಖಾಸಗಿ ಟಿವಿಯೊಂದರಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News