ಚತ್ತೀಸ್ ಗಢ: ಆ್ಯಕ್ಸಿಸ್ ಬ್ಯಾಂಕ್ ನಿಂದ 8.5 ಕೋ.ರೂ. ಮೌಲ್ಯದ ನಗದು, ಚಿನ್ನಾಭರಣ ದರೋಡೆ
ರಾಯ್ ಗಢ: ಶಸಸ್ತ್ರ ದರೋಡೆಕೋರರ ಗುಂಪೊಂದು ಮಂಗಳವಾರ ಬೆಳಗ್ಗೆ ರಾಯ್ ಗಢ ನಗರದಲ್ಲಿರುವ ಖಾಸಗಿ ಬ್ಯಾಂಕಿಗೆ ನುಗ್ಗಿ ಸುಮಾರು 8.5 ಕೋ. ರೂ. ವೌಲ್ಯದ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಆ್ಯಕ್ಸಿಸ್ ಬ್ಯಾಂಕ್ ನ ಜಗತ್ಪುರ ಶಾಖೆಯಲ್ಲಿ ಬೆಳಗ್ಗೆ ಸುಮಾರು 9.30ಕ್ಕೆ ನಡೆದಿದೆ ಎಂದು ರಾಯ್ ಗಢದ ಹಿರಿಯ ಪೊಲೀಸ್ ಅಧೀಕ್ಷಕ ಸದಾನಂದ ಕುಮಾರ್ ಹೇಳಿದ್ದಾರೆ.
‘‘ಸುಮಾರು 6ರಿಂದ 7 ಮಂದಿಯಿದ್ದ ದರೋಡೆಕೋರರ ಗುಂಪು ಬ್ಯಾಂಕ್ ಪ್ರವೇಶಿಸಿತು. ಬ್ಯಾಂಕಿನ ಉದ್ಯೋಗಿಗಳನ್ನು ಒಂದು ಕೊಠಡಿಯಲ್ಲಿ ಒತ್ತೆ ಸೆರೆ ಇರಿಸಿತು. ಲಾಕರ್ ಕೀ ನೀಡುವಂತೆ ಬ್ಯಾಂಕ್ ಮ್ಯಾನೇಜರ್ ಗೆ ಹಲ್ಲೆ ನಡೆಸಿತು.ಬಳಿಕ 7 ಕೋ.ರೂ. ವೌಲ್ಯದ ನಗದು ಹಾಗೂ 1.5 ಕೋ.ರೂ. ವೌಲ್ಯದ ಚಿನ್ನಾಭರಣ, ಚಿನ್ನದ ಬಾರ್ ಗಳನ್ನು ದೋಚಿ ಪರಾರಿಯಾಯಿತು”ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬ್ಯಾಂಕ್ ಮ್ಯಾನೇಜರ್ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.