ನಾಗರಿಕರ ಆಧಾರ್, ಪಾನ್ ವಿವರ ಸೋರಿಕೆ | ಹಲವು ವೆಬ್‌ಸೈಟ್‌ಗಳಿಗೆ ಕೇಂದ್ರ ಸರಕಾರ ನಿರ್ಬಂಧ

Update: 2024-09-27 16:00 GMT
PC : PTI

ಹೊಸದಿಲ್ಲಿ : ಭಾರತೀಯ ನಾಗರಿಕರ ಆಧಾರ್ ಹಾಗೂ ಪಾನ್ ವಿವರ ಸೇರಿದಂತೆ ವೈಯುಕ್ತಿಕ ಗುರುತಿಸಬಹುದಾದ ಮಾಹಿತಿಯನ್ನು ಬಹಿರಂಗಪಡಿಸುತ್ತಿದೆ ಎಂದು ಕಂಡು ಬಂದ ಹಲವು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ.

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡದಿಂದ ನಡೆದ ವೆಬ್‌ಸೈಟ್‌ಗಳ ವಿಶ್ಲೇಷಣೆ ವೆಬ್‌ಸೈಟ್‌ಗಳಲ್ಲಿ ನಿರ್ದಿಷ್ಟ ಭದ್ರತಾ ನ್ಯೂನತೆಯನ್ನು ಬಹಿರಂಗಪಡಿಸಿದ ಬಳಿಕ ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೇಳಿಕೆ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಈ ತುರ್ತು ಸ್ಪಂದನಾ ತಂಡ ಸೈಬರ್ ಭದ್ರತಾ ಘಟನೆಗಳನ್ನು ನಿರ್ವಹಿಸುತ್ತದೆ. ನಿರ್ಬಂಧಿಸಲಾದ ವೆಬ್‌ಸೈಟ್‌ಗಳ ಹೆಸರನ್ನು ಸಚಿವಾಲಯದ ಹೇಳಿಕೆ ಉಲ್ಲೇಖಿಸಿಲ್ಲ.

ಸುರಕ್ಷಿತ ಸೈಬರ್ ಭದ್ರತಾ ಕ್ರಮಗಳಿಗೆ ಹಾಗೂ ವೈಯುಕ್ತಿಕ ದತ್ತಾಂಶಗಳ ರಕ್ಷಣೆಗೆ ಸರಕಾರ ಅತ್ಯಧಿಕ ಆದ್ಯತೆಯನ್ನು ನೀಡುತ್ತಿರುವುದರಿಂದ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ ಮೂಲಸೌರ್ಕರ್ಯಗಳನ್ನು ಬಲಪಡಿಸಲು ಹಾಗೂ ಲೋಪದೋಷಗಳನ್ನು ನಿವಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಿತ ವೆಬ್‌ಸೈಟ್‌ಗಳ ಮಾಲಕರಿಗೆ ಮಾರ್ಗದರ್ಶನಗಳನ್ನು ನೀಡಲಾಗಿತ್ತು ಎಂದು ಅದು ಹೇಳಿದೆ.

ಆಧಾರ್ ವಿವರಗಳ ಸಾರ್ವಜನಿಕ ಪ್ರದರ್ಶನಕ್ಕೆ ಸಂಬಂಧಿಸಿದ ಆಧಾರ್ ಕಾಯ್ದೆ, 2016ರ ಸೆಕ್ಷನ್ 29 (4)ರ ಉಲ್ಲಂಘನೆ ಕುರಿತು ಭಾರತೀಯ ಅನನ್ಯ ಗುರುತಿನ ಪ್ರಾಧಿಕಾರ ಪೊಲೀಸರಿಗೆ ದೂರು ಸಲ್ಲಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಪಾನ್ ಹಾಗೂ ಆಧಾರ್ ವಿವರ ಸೋರಿಕೆಗೆ ಒಳಗಾದ ವ್ಯಕ್ತಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ರಾಜ್ಯ ನಿಯೋಜಿತ ನ್ಯಾಯ ನಿರ್ಣಯ ಅಧಿಕಾರಿ ಮೂಲಕ ಪರಿಹಾರ ಕೋರಬಹುದು. ರಾಜ್ಯದ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ನ್ಯಾಯ ನಿರ್ಣಯ ಅಧಿಕಾರಿಯ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಭಾರತದಲ್ಲಿ ದತ್ತಾಂಶ ಸೋರಿಕೆ 2024ರಲ್ಲಿ ಎಲ್ಲಾ ವರ್ಷಕ್ಕಿಂತ ಅತ್ಯಧಿಕ 19.5 ಕೋಟಿಗೆ ತಲುಪಿರುವುದರಿಂದ ಸರಾಸರಿ ವೆಚ್ಚ ಉಂಟಾಗಿದೆ ಎಂದು ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ಐಬಿಎಂ ಕಳೆದ ಜುಲೈಯಲ್ಲಿ ತನ್ನ ವರದಿಯಲ್ಲಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News