ಕೋಲ್ಕತಾದಲ್ಲಿ ಆಪ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2024-03-22 17:07 GMT

Photo: PTI 

ಕೋಲ್ಕತಾ: ಜಾರಿ ನಿರ್ದೇಶನಾಲಯದಿಂದ (ಈಡಿ) ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಕೋಲ್ಕತಾದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಆಪ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದೆ.

ಮಧ್ಯ ಕೋಲ್ಕತಾದ ಮುರಳೀಧರ ಲೇನ್ ನಲ್ಲಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯ ಕಾರ್ಯಾಲಯದ ಹೊರಗೆ ಈ ಘಟನೆ ನಡೆದಿದೆ.

ಕೇಜ್ರಿವಾಲ್ ಬಂಧನವನ್ನು ಖಂಡಿಸಿ ಭಿತ್ತಿಪತ್ರಗಳು ಹಾಗೂ ಪಕ್ಷದ ಧ್ವಜಗಳನ್ನು ಹಿಡಿದಿದ್ದ ಆಪ್ ಕಾರ್ಯಕರ್ತರು, ಬಿಜೆಪಿ ಕಾರ್ಯಾಲಯದ ಸಮೀಪ ಪ್ರತಿಭಟನೆ ನಡೆಸುತ್ತಿದ್ದರು.

ಕೇಂದ್ರ ಸರಕಾರದ ವಿರುದ್ಧ ಆಪ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದಾಗ, ಪಕ್ಷದ ಕಚೇರಿಯಿಂದ ಹೊರಬಂದ ಬಿಜೆಪಿ ಕಾರ್ಯಕರ್ತರು, ಪ್ರತಿ ಘೋಷಣೆಗಳನ್ನು ಕೂಗತೊಡಗಿದರು. ಆಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡೂ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಆಗ ಮದ್ಯಪ್ರವೇಶಿಸಿದ ಪೊಲೀಸರು, ಘರ್ಷಣೆ ನಿರತರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. 30 ಮಂದಿ ಆಪ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ತಮ್ಮ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಬಿಜೆಪಿ ಬೆಂಬಲಿಗರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆಪ್ ಕಾರ್ಯಕರ್ತರು ಆಪಾದಿಸಿದ್ದಾರೆ. ಇದಕ್ಕೆ ಪ್ರತ್ಯಾರೋಪ ಮಾಡಿರುವ ಬಿಜೆಪಿಯು ತನ್ನ ಹಿರಿಯ ನಾಯಕರ ವಿರುದ್ಧ ಆಪ್ ಬೆಂಬಲಿಗರು ನಿಂದನಾತ್ಮಕ ಘೋಷಣೆಗಳನ್ನು ಕೂಗಿದ್ದಾರೆಂದು ದೂರಿದ್ದಾರೆ.

ಕೇಜ್ರಿವಾಲ್ ಬಂಧನಕ್ಕೆ ವಿಪಕ್ಷ ಪ್ರತಿಭಟನೆ

ದಿಲ್ಲಿ ಸರಕಾರದ ಮದ್ಯ ನೀತಿಯಲ್ಲಿ ಅಕ್ರಮಗಳು ನಡೆದಿದೆಯೆನ್ನಲಾದ ಆರೋಪಗಳಿಗೆ ಸಂಬಂಧಿಸಿ ಗುರುವಾರ ಬಂಧಿತರಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಡೀ ರಾತ್ರಿಯನ್ನು ಈಡಿ ಕಸ್ಟಡಿಯಲ್ಲಿ ಕಳೆದರು.

ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಅವರನ್ನು ಈಡಿ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದರು.

ಅರವಿಂದ ಕೇಜ್ರಿವಾಲ್ ಬಂಧನಕ್ಕೆ ದೇಶಾದ್ಯಂತ ವಿವಿಧ ಪಕ್ಷಗಳ ನಾಯಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದೆಯೆಂದು ಆಪ್ ನಾಯಕ ರಾಘವಚಡ್ಡಾ ಹೇಳಿದ್ದು, ಏಜೆನ್ಸಿಗಳನ್ನು ಇಷ್ಟೊಂದು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿರುವುದನ್ನು ಭಾರತವು ಹಿಂದೆಂದೂ ಕಂಡಿಲ್ಲ’’ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಪ್ ಪ್ರತಿಭಟನೆ: ಲೋಕ ಕಲ್ಯಾಣ್ ಮಾರ್ಗ್ ನಲ್ಲಿ ಮೆಟ್ರೋ ಸ್ಥಗಿತ 

 ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ದಿಲ್ಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ)ವು ಲೋಕಕಲ್ಯಾಣ ಮಾರ್ಗ್ ಮೆಟ್ರೋ ನಿಲ್ದಾಣವನ್ನು ಶುಕ್ರವಾರ ಮುಚ್ಚುಗಡೆಗೊಳಿಸಿತು. ಈ ಮೆಟ್ರೋ ನಿಲ್ದಾಣವು ಪ್ರಧಾನಿಯವರ ಅಧಿಕೃತ ನಿವಾಸವಿರುವ ಲೋಕಕಲ್ಯಾಣ್ ಮಾರ್ಗ್ ಪ್ರದೇಶದಲ್ಲಿದೆ. ದಿಲ್ಲಿ ಪೊಲೀಸರ ಆದೇಶದ ಮೇರೆಗೆ ಲೋಕಕಲ್ಯಾಣ್ ಮಾರ್ಗ್ ಹಾಗೂ ಐಟಿಓ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಯಿತೆಂದು ದಿಲ್ಲಿ ಮೆಟ್ರೋ ರೈಲು ನಿಗಮದ ‘ಎಕ್ಸ್’ನಲ್ಲಿ ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News