ಮುಂಬೈ ಪೊಲೀಸರಿಂದ ಅಜಿತ್ ಪವಾರ್, ಪತ್ನಿ, ಅಳಿಯನಿಗೆ ಕ್ಲೀನ್ ಚಿಟ್

Update: 2024-04-24 15:29 GMT

ಅಜಿತ್ ಪವಾರ್ | PC : PTI 

ಮುಂಬೈ : ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ಗೆ ಸಂಬಂಧಿಸಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧಗಳ ವಿಭಾಗವು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅಳಿಯ ರೋಹಿತ್ ಪವಾರ್ ನಿರ್ದೋಷಿಗಳೆಂದು ಸಾರಿದೆ.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ನ ಅಧಿಕಾರಿಗಳು ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಅವರ ಸಂಬಂಧಿಕರು ಅಥವಾ ಇತರ ವ್ಯಕ್ತಿಗಳಿಗೆ ಸರಿಯಾದ ವಿಧಿವಿಧಾನಗಳನ್ನು ಅನುಸರಿಸದೆ ಅಕ್ರಮವಾಗಿ ಸಾಲಗಳನ್ನು ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಕಳೆದ ವರ್ಷದ ಜುಲೈನಲ್ಲಿ, ಅಜಿತ್ ಪವಾರ್ ತನ್ನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಹಲವು ಶಾಸಕರೊಂದಿಗೆ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ (ಏಕನಾಥ ಶಿಂದೆ ಬಣ) ಮೈತ್ರಿಕೂಟ ಸರಕಾರಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿದ್ದರು.

ಇದರಿಂದಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ಇಬ್ಭಾಗವಾಗಿತ್ತು. ಒಂದು ಬಣವು ಶರದ್ ಪವಾರ್ ನೇತೃತ್ವದ ಬಣದಲ್ಲಿ ಉಳಿದರೆ, ಇನ್ನೊಂದು ಬಣವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಹೋಯಿತು.

ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಘೋಷಿಸಿ ಅವುಗಳನ್ನು ಬಳಿಕ ಜುಜುಬಿ ಬೆಲೆಗೆ ನಿರ್ದೇಶಕರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿತ್ತು.

ಮುಂಬೈ ಪೊಲೀಸ್ ನ ಹಣಕಾಸು ಅಪರಾಧಗಳ ವಿಭಾಗವು ತನ್ನ ಪ್ರಕರಣ ಮುಕ್ತಾಯ ವರದಿಯನ್ನು ಜನವರಿಯಲ್ಲೇ ಸಲ್ಲಿಸಿತ್ತು. ಆದರೆ, ಅದರ ವಿವರಗಳನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

ನಡೆದಿದೆ ಎನ್ನಲಾದ ಅವ್ಯವಹಾರಗಳಿಂದ ಸಹಕಾರಿ ಬ್ಯಾಂಕ್ ಗೆ ಯಾವುದೇ ನಷ್ಟವಾಗಿಲ್ಲ ಹಾಗೂ ಬ್ಯಾಂಕ್ ನೀಡಿರುವ ಅಕ್ರಮ ಸಾಲಗಳ ಪೈಕಿ 1,343.41 ಕೋಟಿ ರೂಪಾಯಿಯನ್ನು ಈವರೆಗೆ ವಸೂಲಿ ಮಾಡಲಾಗಿದೆ ಎಂದು ಹಣಕಾಸು ಅಪರಾಧ ವಿಭಾಗದ ಮುಕ್ತಾಯ ವರದಿ ಹೇಳಿದೆ.

ಮುಕ್ತಾಯ ವರದಿಯ ಹಿನ್ನೆಲೆಯಲ್ಲಿ, ಇನ್ನು ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುವಂತಿಲ್ಲ.

ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ನ್ಯಾಶನಲ್ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್ ಬಣ)ದಿಂದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಪ್ರಕರಣದ ಇನ್ನೋರ್ವ ಆರೋಪಿ ರೋಹಿತ್ ಪವಾರ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ)ದ ಶಾಸಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News