ನೀಟ್ ಪರೀಕ್ಷೆಯನ್ನು ಮತ್ತೊಮ್ಮೆ ಪಾರದರ್ಶಕವಾಗಿ ನಡೆಸಿ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ, ಜು. 5: ನೀಟ್ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆಗ್ರಹಿಸಿದ್ದಾರೆ. ಎಲ್ಲಾ ಪ್ರಶ್ನೆ ಪತ್ರಿ ಸೋರಿಕೆ ಹಗರಣವನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಕೂಲಂಕಷವಾಗಿ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
‘ಎಕ್ಸ್’ನ ಪೋಸ್ಟ್‌ನಲ್ಲಿ ಖರ್ಗೆ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಮೋದಿ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಲಕ್ಷಾಂತರ ಯುವಕರಿಗೆ ಈ ಹಸಿ ಸುಳ್ಳನ್ನು ಹೇಳಲಾಗುತ್ತಿದೆ. ಅವರ ಭವಿಷ್ಯ ಹಾಳಾಗುತ್ತಿದೆ ಎಂದು ಅವರು ಹೇಳಿದರು.
ಕೆಲವು ಸ್ಥಳಗಳಲ್ಲಿ ಮಾತ್ರ ಅಕ್ರಮ ನಡೆದಿದೆ ಎಂದು ಶಿಕ್ಷಣ ಸಚಿವಾಲಯ ನೀಡಿದ ಹೇಳಿಕೆಯ ಕುರಿತು ಗಮನ ಸೆಳೆದ ಖರ್ಗೆ, ಇದು ದಾರಿತಪ್ಪಿಸುವ ಪ್ರಯತ್ನ ಎಂದಿದ್ದಾರೆ.
ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಬಿಜೆಪಿ-ಆರೆಸ್ಸೆಸ್ ಶಿಕ್ಷಣ ಮಾಫಿಯಾವನ್ನು ಪ್ರಚಾರ ಮಾಡುತ್ತಿದೆ. ಅದು ಎನ್‌ಸಿಇಆರ್‌ಟಿ ಪುಸ್ತಕವಾಗಲಿ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿ ಮೋದಿ ಸರಕಾರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ನೀಟ್-ಯುಜಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಬೇಕು ಎಂದು ನಾವು ಪುನರುಚ್ಛರಿಸುತ್ತೇವೆ. ಅಲ್ಲದೆ, ಪರೀಕ್ಷೆಯನ್ನು ಪಾರದರ್ಶಕ ರೀತಿಯಲ್ಲಿ ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಖರ್ಗೆ ಹೇಳಿದರು.