ಅಸ್ಸಾಂ: ಗುವಾಹಟಿಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಗೆ ಪೊಲೀಸರ ತಡೆ

Update: 2024-01-23 07:53 GMT

Screengrab:X/@IYC

ಗುವಾಹಟಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಗುವಾಹಟಿ ನಗರದಲ್ಲಿ ಮುಂದುವರಿಸಲು ಕಾಂಗ್ರೆಸ್ ನ ಸುಮಾರು 5,000 ಕಾರ್ಯಕರ್ತರು ಯತ್ನಿಸಿದ್ದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಗುವಾಹಟಿ ನಗರದಲ್ಲಿ ಹಾದು ಹೋಗುವುದನ್ನು ತಡೆಯಲು ಭಾರಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ಇದಕ್ಕೂ ಮುನ್ನ, ನ್ಯಾಯ ಯಾತ್ರೆಯು ಗುವಾಹಟಿಯ ಒಳ ರಸ್ತೆಗಳ ಮೂಲಕ ಹಾದು ಹೋಗಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅನುಮತಿ ನಿರಾಕರಿಸಿದ್ದರು. ಇಂದು ಕೆಲಸದ ದಿನವಾಗಿರುವುದರಿಂದ ಗುವಾಹಟಿಯ ಮುಖ್ಯ ರಸ್ತೆಗಳಲ್ಲಿ ಯಾತ್ರೆ ಹಾದು ಹೋಗಲು ಅನುಮತಿ ನೀಡಿದರೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಯಾತ್ರೆಯು ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಬಳಸಬೇಕು ಎಂದು ಅಸ್ಸಾಂ ಸರ್ಕಾರವು ಸೂಚಿಸಿತ್ತು. ಗುವಾಹಟಿ ನಗರದ ಸುತ್ತ ವರ್ತುಲ ರಸ್ತೆಯಂತೆ ಕಾರ್ಯಾಚರಿಸುವ ರಾಷ್ಟ್ರೀಯ ಹೆದ್ದಾರಿ 27ರ ಮೂಲಕ ಹಾದು ಹೋಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಆದರೆ, ಕ್ಷುಲ್ಲಕ ಕಾರಣ ನೀಡಿ ರಾಜ್ಯ ಸರ್ಕಾರವು ಗುವಾಹಟಿ ನಗರದೊಳಗೆ ಯಾತ್ರೆ ಪ್ರವೇಶಿಸಲು ಅನುಮತಿ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಗೆ ಹಿಮಂತ ಬಿಸ್ವ ಶರ್ಮ ನೇತೃತ್ವದ ರಾಜ್ಯ ಸರ್ಕಾರವು ತೊಂದರೆ ನೀಡುತ್ತಿದೆ ಎಂದೂ ಕಾಂಗ್ರೆಸ್ ದೂರಿದೆ. “ನಮ್ಮ ಯಾತ್ರೆಯು ಅಸ್ಸಾಂ ಪ್ರವೇಶಿಸುತ್ತಿದ್ದಂತೆಯೆ, ಭಾರತದ ಅತ್ಯಂತ ಭ್ರಷ್ಟಾಚಾರಿ ಮುಖ್ಯಮಂತ್ರಿಯು ನಮ್ಮ ಬೆಂಗಾವಲು ಪಡೆ, ಸಾಮಗ್ರಿಗಳು ಹಾಗೂ ನಾಯಕರ ಮೇಲೆ ತನ್ನ ಗೂಂಡಾಗಳನ್ನು ಬಳಸಿಕೊಂಡು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News