ಟ್ರಂಪ್ ಭಾರತವನ್ನು ಅವಮಾನಿಸುತ್ತಿದ್ದರೂ ಮೋದಿ ಮತ್ತು ಜೈಶಂಕರ್ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್

Update: 2025-02-23 22:30 IST
Modi, Jaishankar

ನರೇಂದ್ರ ಮೋದಿ ,  ಎಸ್.ಜೈಶಂಕರ್ | PTI 

  • whatsapp icon

ಹೊಸದಿಲ್ಲಿ: ಯುಎಸ್‌ಏಡ್ ನಿಧಿ ವಿವಾದದ ನಡುವೆಯೇ ಕಾಂಗ್ರೆಸ್ ಪಕ್ಷವು ಬಿಜೆಪಿಯು ‘ಅಮೆರಿಕದಿಂದ ನಕಲಿ ಸುದ್ದಿಗಳನ್ನು’ ಹರಡುವ ಮೂಲಕ ದೇಶವಿರೋಧಿ ಕೃತ್ಯದಲ್ಲಿ ತೊಡಗಿದೆ ಎಂದು ರವಿವಾರ ಆರೋಪಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಸರಕಾರಿ ಕಾರ್ಯದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಭಾರತವನ್ನು ಪದೇ ಪದೇ ಅವಮಾನಿಸುತ್ತಿರುವಾಗ ಸರಕಾರವು ಏಕೆ ಮೌನವಾಗಿದೆ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಉತ್ತರಿಸಬೇಕಿದೆ ಎಂದು ಪ್ರತಿಪಾದಿಸಿದೆ.

ಅಮೆರಿಕದಿಂದ ಆರ್ಥಿಕ ನೆರವಿನ ಬಗ್ಗೆ ಸರಕಾರವು ಶ್ವೇತಪತ್ರವನ್ನು ಹೊರಡಿಸಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿದೆ.

ಕಾಂಗ್ರೆಸ್‌ ನ ಎಲ್ಲ ಆರೋಪಗಳನ್ನು ತಿರಸ್ಕರಿಸಿರುವ ಬಿಜೆಪಿ,ರಾಹುಲ್ ಗಾಂಧಿಯವರನ್ನು ‘ದೇಶದ್ರೋಹಿ’ ಎಂದು ಕರೆದಿದೆ ಮತ್ತು ಭಾರತವನ್ನು ದುರ್ಬಲಗೊಳಿಸುವ ತನ್ನ ಪ್ರಯತ್ನದಲ್ಲಿ ಅವರು ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದೆ.

’ಬಿಜೆಪಿಯು ಸುಳ್ಳುಗಾರರು ಮತ್ತು ಅನಕ್ಷರಸ್ಥರ ಮೆರವಣಿಗೆಯಾಗಿದೆ. ಬಿಜೆಪಿ ಮತ್ತು ಅದರ ಬೂಟುಗಳನ್ನು ನೆಕ್ಕುವವರು ಬಂಡವಾಳವಾಗಿಸಿಕೊಂಡಿದ್ದ ಅಮೆರಿಕದಿಂದ 21 ಕೋ.ಡಾ.ಗಳ ನಿಧಿಯ ಸುದ್ದಿಯು ನಕಲಿ ಎನ್ನುವುದು ಈಗ ಬಯಲಾಗಿದೆ. 2022ರಲ್ಲಿ ಯುಎಸ್‌ಏಡ್‌ನ 21 ಮಿ.ಡಾ.ನೆರವು ಭಾರತದಲ್ಲಿ ಮತದಾರರ ಪ್ರಮಾಣವನ್ನು ಹೆಚ್ಚಿಸಲು ಆಗಿರಲಿಲ್ಲ, ಅದು ಬಾಂಗ್ಲಾದೇಶಕ್ಕೆ ಒದಗಿಸಿದ ನೆರವು ಆಗಿತ್ತು. ಎಲಾನ್ ಮಸ್ಕ್ ಸುಳ್ಳು ಹೇಳಿಕೆಯನ್ನು ನೀಡಿದ್ದರು. ಟ್ರಂಪ್ ಭಾರತ ಮತ್ತು ಬಾಂಗ್ಲಾದೇಶ ನಡುವೆ ಗೊಂದಲಕ್ಕೊಳಕ್ಕಾಗಿದ್ದರು. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಈ ಸುಳ್ಳನ್ನು ಹರಡಿದ್ದರು, ಬಳಿಕ ಬಿಜೆಪಿಯ ಬೂಟು ನೆಕ್ಕುವ ಇತರರು ಅದನ್ನೇ ಬಂಡವಾಳವಾಗಿಸಿಕೊಂಡಿದ್ದರು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರವಿವಾರ ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

‘ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು 21 ಮಿ.ಡಾ.ನೆರವನ್ನು ಯುಎಸ್‌ಏಡ್ ರದ್ದುಗೊಳಿಸಿದೆ ಎಂದು ಟ್ರಂಪ್ ಆಡಳಿತದ ಸರಕಾರಿ ಕಾರ್ಯದಕ್ಷತೆ ಇಲಾಖೆ(DOGE) ಹೇಳಿದಾಗಿನಿಂದ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿರುವ ರಮೇಶ್, ಈ ಇಡೀ ಸುದ್ದಿ ಸುಳ್ಳು ಎನ್ನುವುದು ಈಗ ಬೆಳಕಿಗೆ ಬರುತ್ತಿದೆ. ಹಣ ಭಾರತವನ್ನು ತಲುಪಿಯೇ ಇಲ್ಲದಿದ್ದಾಗ ರದ್ದು ಮಾಡಿದ್ದು ಏನನ್ನು?’ಎಂದು ಪ್ರಶ್ನಿಸಿದ್ದಾರೆ.

‘ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿ ಸುಳ್ಳುಸುದ್ದಿಗಳನ್ನು ಹರಡಿದ್ದು ಏಕೆ? ಅಮೆರಿಕದಿಂದ ಸುಳ್ಳುಸುದ್ದಿಯನ್ನು ಹರಡುವ ಮೂಲಕ ಬಿಜೆಪಿ ದೇಶವಿರೋಧಿ ಕೆಲಸ ಮಾಡಿದ್ದು ಏಕೆ? ಅಮೆರಿಕದಿಂದ ಸುಳ್ಳುಸುದ್ದಿ ಕುರಿತು ಭಾರತದ ಪ್ರತಿಪಕ್ಷವನ್ನು ಬಿಜೆಪಿ ಆರೋಪಿಸುತ್ತಿರುವುದು ದೇಶದ್ರೋಹವಲ್ಲದಿದ್ದರೆ ಬೇರೇನು?;ಈ ಪ್ರಶ್ನೆಗಳಿಗೆ ಬಿಜೆಪಿ ಈಗ ಉತ್ತರಿಸಬೇಕಿದೆ’ ಎಂದು ಹೇಳಿರುವ ರಮೇಶ್, ಅಮೆರಿಕ ಭಾರತವನ್ನು ಪದೆ ಪದೇ ಅವಮಾನಿಸುತ್ತಿದ್ದರೂ ನಮ್ಮ ಸರಕಾರವೇಕೆ ಮೌನವಾಗಿದೆ? ಇದು ಅಮೆರಿಕದಲ್ಲಿ ದಾಖಲಾಗಿರುವ ಭ್ರಷ್ಟಾಚಾರ ಆರೋಪದಲ್ಲಿ ಅದಾನಿಗೆ ಕರುಣೆಯನ್ನು ಬೇಡಿಕೊಳ್ಳುವ ಪ್ರಕ್ರಿಯೆಯಲ್ಲಿ ದೇಶದ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡಿರುವ ಪ್ರಕರಣವೇ?’ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News