10 ವರ್ಷಗಳ ನಂತರವೂ ಕಾಂಗ್ರೆಸ್‌ಗೆ 100ರ ಗಡಿ ತಲುಪಲಾಗಲಿಲ್ಲ: ಪ್ರಧಾನಿ ಮೋದಿ ವ್ಯಂಗ್ಯ

Update: 2024-06-07 10:51 GMT

Photo credit: ANI

ಹೊಸದಿಲ್ಲಿ: ಇಂದು ಎನ್‌ಡಿಎ ಸಂಸದರ ಸಭೆ ನಡೆದಾಗ ತಮ್ಮ ಭಾಷಣದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಕೆಣಕಿದ್ದಾರೆ. ಕಾಂಗ್ರೆಸ್‌ ಮತ್ತೊಮ್ಮೆ 100 ಸೀಟುಗಳ ಗಡಿ ತಲುಪಲು ವಿಫಲವಾಗಿದೆ. ಬಿಜೆಪಿ ಒಂದು ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳನ್ನು ಕಾಂಗ್ರೆಸ್‌ ಮೂರು ಚುನಾವಣೆಗಳಲ್ಲಿ ಗಳಿಸಿದೆ ಎಂದು ಅವರು ಹೇಳಿದ್ದಾರೆ.

“ನಾವು ಸೋತಿಲ್ಲ ಅಥವಾ ಯಾರೂ ನಮ್ಮನ್ನು ಸೋಲಿಸಿಲ್ಲ. ನಮ್ಮ ಮೌಲ್ಯಗಳು ಎಂತಹವು ಎಂದರೆ ವಿಜಯ ದೊರೆತಾಗ ಅತಿ ಆನಂದದಲ್ಲಿ ತೇಲಾಡುವುದಿಲ್ಲ ಹಾಗೂ ಸೋತವರನ್ನು ಅಣಕವಾಡುವುದಿಲ್ಲ. ಸೋತವರನ್ನು ಅಣಕಿಸುವ ಅಭ್ಯಾಸ ನಮಗಿಲ್ಲ,” ಎಂದು ಮೋದಿ ಹೇಳಿದರು.

“ಹತ್ತು ವರ್ಷಗಳ ನಂತರವೂ ಕಾಂಗ್ರೆಸ್‌ ಪಕ್ಷಕ್ಕೆ 100 ಸೀಟುಗಳನ್ನು ತಲುಪಲು ಆಗಿಲ್ಲ. ನಾವು 2014, 2019 ಮತ್ತು 2024 ಚುನಾವಣೆಗಳ್ಲಲಿ ಕಾಂಗ್ರೆಸ್‌ ಗಳಿಸಿದ ಸ್ಥಾನಗಳನ್ನು ಗಮನಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ ಗಳಿಸಿದಷ್ಟು ಸ್ಥಾನಗಳನ್ನೂ ಗಳಿಸಲು ಅದಕ್ಕೆ ಅಗಿಲ್ಲ. ಇಂಡಿ ಮೈತ್ರಿಕೂಟದ ಜನರು ಈ ಹಿಂದೆ ನಿಧಾನವಾಗಿ ಮುಳುಗುತ್ತಿದ್ದರು… ಈಗ ಅವರು ಅತಿ ವೇಗವಾಗಿ ಮುಳುಗಲಿದ್ದಾರೆ,” ಎಂದು ಪ್ರಧಾನಿ ಹೇಳಿದರು.

“ನಮ್ಮ ಮೈತ್ರಿಕೂಟವು ಭಾರತದ ಅಸ್ಮಿತೆಯನ್ನು ಪ್ರತಿಫಲಿಸುತ್ತದೆ. ನಾವು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಬದ್ಧವಾಗಿದ್ದೇವೆ. ಈ ಸದನದಲ್ಲಿ ನಾನು 2019ರಲ್ಲಿ ಮಾತನಾಡಿದಾಗ ನೀವು ನನ್ನನ್ನು ನಾಯಕನನ್ನಾಗಿ ಆರಿಸಿದಿರಿ. ಆಗ ನಾನು ವಿಶ್ವಾಸದ ಕುರಿತು ಹೆಚ್ಚು ಒತ್ತು ನೀಡಿದ್ದೆ. ಇಂದು ಮತ್ತೆ ಆ ಹುದ್ದೆಯನ್ನು ನನಗೆ ನೀಡುತ್ತಿದ್ದೀರಿ, ಅದರರ್ಥ ನಮ್ಮ ನಡುವಿನ ವಿಶ್ವಾಸದ ಸೇತು ಬಲವಾಗಿದೆ. ಇದು ಸುದೃಢ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಅದೇ ದೊಡ್ಡ ಆಸ್ತಿ,” ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News