ಮಹಾರಾಷ್ಟ್ರದಲ್ಲಿ ಪುಟಿದೆದ್ದ ಕಾಂಗ್ರೆಸ್… ಝೀರೋ ಟು ಹೀರೋ

Update: 2024-06-07 16:44 GMT

ಎರಡು ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯವೇ ಇರಲಿಲ್ಲ. 48 ಲೋಕಸಭಾ ಕ್ಷೇತ್ರವಿರುವ ಮಹಾರಾಷ್ಟ್ರದಲ್ಲಿ, 2019 ರಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಸ್ಥಾನ. ಆ ಒಬ್ಬ ಸಂಸದರು ನಿಧನರಾದ ಬಳಿಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಗೆ ಲೋಕಸಭಾ ಸ್ಥಾನ ಶೂನ್ಯಕ್ಕಿಳಿಯಿತು.

ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ಬರುತ್ತಿದ್ದಿದ್ದುದು ಕಾಂಗ್ರೆಸ್ ನಿಂದ ಬಿಟ್ಟು ಹೋದ ನಾಯಕರುಗಳ ಸುದ್ದಿ. ಮಾಜಿ ಸಿಎಂಗಳು, ಮಾಜಿ ಸಚಿವರು, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಹೀಗೆ ಹಲವು ಘಟಾನುಘಟಿಗಳು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿತ್ತು.

ಆದರೆ ಜೂನ್ 4ರಂದು ಇದೆಲ್ಲವೂ ಸಂಪೂರ್ಣವಾಗಿ ಬದಲಾಯ್ತು. ಇಂದು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸಂಸದರಿರುವ ಪಕ್ಷ ಕಾಂಗ್ರೆಸ್. ಒಟ್ಟು 48 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 13, ಬಿಜೆಪಿ 9, ಉದ್ಧವ್ ಠಾಕ್ರೆಯ ಶಿವಸೇನೆ 9, ಏಕನಾಥ್ ಶಿಂಧೆಯ ಶಿವಸೇನೆ 7, ಶರದ್ ಪವಾರ್ ಅವರ ಎನ್ ಸಿ ಪಿ 8, ಅಜಿತ್ ಪವಾರ್ ಅವರ ಎನ್ ಸಿ ಪಿ 1 ಸ್ಥಾನಗಳನ್ನು ಪಡೆದಿದೆ. ಒಂದು ಸ್ಥಾನದಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಪಕ್ಷೇತರರಾಗಿ ಗೆದ್ದ ಸಾಂಗ್ಲಿಯ ವಿಶಾಲ್ ಪಾಟೀಲ್ ಅವರೂ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೆಸ್ ಬಳಿ ಇರುವ ಸಂಸದರ ಸಂಖ್ಯೆ 14 ಕ್ಕೆ ಏರಿದೆ. ಶೂನ್ಯದಿಂದ ಹದಿನಾಲ್ಕು! ಅಲ್ಲದೇ, ರಾಜ್ಯದಲ್ಲೇ ಅತೀ ಹೆಚ್ಚು ಸಂಸದರಿರುವ ಪಕ್ಷ. ಇದು ಕಾಂಗ್ರೆಸ್ ಪಾಲಿಗೆ ನಿಜಕ್ಕೂ ನಂಬಲಾರದ ಸಾಧನೆ, ಊಹಿಸಲಾಗದ ಬದಲಾವಣೆ.

1980ರ ದಶಕದಿಂದ 2014ರ ನಡುವೆ 1995ರಿಂದ 1999 ನಾಲ್ಕು ವರ್ಷ ಬಿಟ್ಟರೆ ಮಹಾರಾಷ್ಟ್ರದ ಸಿಎಂ ಗಾದಿ ಕಾಂಗ್ರೆಸ್ ಕೈಯಲ್ಲೇ ಇತ್ತು. 1999 ರಲ್ಲಿ ಶರದ್ ಪವಾರ್ ಬಂಡಾಯ, ಆಗಾಗ ಭ್ರಷ್ಟಾಚಾರದ ಆರೋಪಗಳು ಹಾಗೂ 2008ರ ಭೀಕರ ಭಯೋತ್ಪಾದಕ ದಾಳಿ, ಇವೆಲ್ಲವನ್ನೂ ಸಂಭಾಳಿಸಿಕೊಂಡು ಮಹಾರಾಷ್ಟ್ರದಲ್ಲಿ ತನ್ನ ಪ್ರಭಾವ ಹಾಗೂ ಅಧಿಕಾರ, ಎರಡನ್ನೂ ಕಾಂಗ್ರೆಸ್ ಉಳಿಸಿಕೊಂಡಿತ್ತು.

ಆದರೆ 2014 ರಲ್ಲಿ ಅದೆಲ್ಲವೂ ಒಂದೇ ಏಟಿಗೆ ಬದಲಾಗಿ ಹೋಯಿತು. ಆಗ ಬಿಜೆಪಿ ಹಾಗೂ ಮೋದಿ ಅಲೆಗೆ ಕೊಚ್ಚಿಕೊಂಡು ಹೋದ ಕಾಂಗ್ರೆಸ್ ಈ ಚುನಾವಣೆವರೆಗೂ ಮಹಾರಾಷ್ಟ್ರದಲ್ಲಿ ಚೇತರಿಸಿಕೊಳ್ಳಲಿಲ್ಲ. 2014ರಲ್ಲಿ 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳನ್ನು. ಅಲ್ಲಿಂದ ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪಾಲಿಗೆ ಇಳಿಮುಖವಾಗುತ್ತಲೇ ಹೋದವು. ಕೊನೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗಿ ಬಿಡುತ್ತಿದೆ ಎಂಬಂತಾಯಿತು.

2019 ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಕೇವಲ ಒಂದೇ ಸ್ಥಾನ. ಆ ಒಬ್ಬ ಸಂಸದ ಚಂದ್ರಾಪುರದ ಬಾಲು ಧನೋರ್ಕರ್, 2023ರ ಮೇ ತಿಂಗಳಲ್ಲಿ ನಿಧನರಾದರು. ಲೋಕಸಭೆಯ ಜೊತೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಸ್ಥಾನಗಳು ಕುಸಿಯುತ್ತಲೇ ಸಾಗಿತು.

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 288. 2014 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕಿದ್ದು 42 ಸ್ಥಾನಗಳು. 2019 ರಲ್ಲಿ ಕಾಂಗ್ರೆಸ್ ಗೆದ್ದಿದ್ದು 44 ಸ್ಥಾನಗಳು. ಪಡೆದಿದ್ದು ನಾಲ್ಕನೇ ಸ್ಥಾನ. ಬ್ರಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಪ್ರಾತಿನಿಧ್ಯ ಕುಸಿಯುತ್ತಲೇ ಸಾಗಿತು.

ಪಕ್ಷ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ ಮುಳುಗುವ ದೋಣಿಯಿಂದ ಹಾರುವ ನಾಯಕರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಮಾಜಿ ಸಂಸದರಾದ ಮಿಲಿಂದ್ ದಿಯೋರಾ, ಸಂಜಯ್ ನಿರುಪಮ್, ಮಾಜಿ ಸಿಎಂ ಅಶೋಕ್ ಚವಾಣ್, ಮಾಜಿ ಸಚಿವ ಕೃಪಾಶಂಕರ್ ಸಿಂಗ್, ಮಾಜಿ ಸಚಿವ ಬಾಬಾ ಸಿದ್ದೀಕಿ, ಅವರ ಪುತ್ರ ಝೀಶಾನ್ ಸಿದ್ದೀಕಿ ಹೀಗೆ ಕಾಂಗ್ರೆಸ್ ಗೆ ಕೈ ಕೊಟ್ಟವರ ಪಟ್ಟಿ ದೊಡ್ಡದಿದೆ. ಈ ಪೈಕಿ ಬಹುತೇಕರು ಬಿಜೆಪಿ ಕದ ತಟ್ಟಿದರು.

ಆದರೆ ಶರದ್ ಪವಾರ್ ಅವರ ಕನಸಿನ ಕೂಸಾದ ಮಹಾ ವಿಕಾಸ್ ಅಘಾಡಿ ರಚನೆ ಹಾಗೂ ಅದರಲ್ಲಿ ಕಾಂಗ್ರೆಸ್ ಸೇರ್ಪಡೆ ಮಹಾರಾಷ್ಟ್ರದ ದಿಕ್ಕೇ ಬದಲಾಯಿಸಿತು. 2019 ರ ವಿಧಾನಸಭಾ ಚುನಾವಣೆ ಬಳಿಕ ಎನ್ ಡಿ ಎ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ಬಿಜೆಪಿ ನಡುವೆ ಸಿಎಂ ಸ್ಥಾನದ ಬಗ್ಗೆ ಒಮ್ಮತ ಮೂಡಲಿಲ್ಲ. ಆಗ ಮಧ್ಯಪ್ರವೇಶಿಸಿದ ಶರದ್ ಪವಾರ್, ಶಿವಸೇನೆ ಜೊತೆ ಎನ್ ಸಿ ಪಿ ಹಾಗೂ ಕಾಂಗ್ರೆಸ್ ಅನ್ನು ಸೇರಿಸಿ ಮಹಾ ವಿಕಾಸ್ ಆಘಾಡಿ ಎಂಬ ಮೈತ್ರಿಕೂಟ ರಚಿಸಿ ಸರಕಾರ ರಚಿಸಿದರು. ಶಿವಸೇನೆ ಜೊತೆ ಕೈಜೋಡಿಸಲು ಮೊದಲು ರಾಹುಲ್ ಗಾಂಧಿ ಹಿಂಜರಿದ್ದರು. ಆದರೆ ಶರದ್ ಪವಾರ್ ಅವರು ಸೋನಿಯಾ ಗಾಂಧಿಯ ಮನವೊಲಿಸಿ ಮೈತ್ರಿಗೆ ಒಪ್ಪಿಗೆ ಪಡೆದರು.

ಮಹಾ ವಿಕಾಸ್ ಅಘಾಡಿ ಜೊತೆ ಸೇರಿದ್ದು ಕಾಂಗ್ರೆಸ್ ಗೆ ದೊಡ್ಡ ಲಾಭವನ್ನೇ ತಂದಿದೆ. ಶಿವಸೇನೆ ಹಾಗೂ ಎನ್ ಸಿ ಪಿ ಎರಡರಲ್ಲೂ ಬಂಡಾಯವಾಗಿ ಆ ಪಕ್ಷಗಳು ಇಬ್ಭಾಗವಾದರೂ ಉದ್ಧವ್ ಹಾಗೂ ಶರದ್ ಪವಾರ್ ಜೊತೆ ರಾಹುಲ್ ಆಪ್ತರಾದರು. ಮೂರೂ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿತು. ಜೊತೆಗೆ ರಾಹುಲ್ ಗಾಂಧಿಯ ಭಾರತ ನ್ಯಾಯ ಯಾತ್ರೆ, ಮುಂಬೈಯಲ್ಲಿ ಆದ ಅದರ ಸಮಾರೋಪ, ಇವೆಲ್ಲವೂ ಒಂದಕ್ಕೊಂದು ಕೂಡಿಕೊಂಡು ಕಾಂಗ್ರೆಸ್ ಕೈ ಹಿಡಿದಿವೆ. ವಿಶೇಷವಾಗಿ ಶಿವಸೇನೆ ಹಾಗೂ ಎನ್ ಸಿ ಪಿ ಮೈತ್ರಿ ಕಾಂಗ್ರೆಸ್ ನ ಕೈ ಬಲಪಡಿಸಿದೆ.

ಇನ್ನೊಂದು ಪ್ರಮುಖ ಅಂಶ ಚುನಾವಣೆಯಲ್ಲಿ ಕೆಲಸ ಮಾಡಿತು. ಎನ್ ಡಿ ಎ 400 ಸೀಟು ಪಡೆದರೆ ಸಂವಿಧಾನ ಬದಲಾಯಿಸಲಿದೆ, ಮೀಸಲಾತಿ ರದ್ದು ಮಾಡಲಿದೆ ಎಂಬ INDIA ಮೈತ್ರಿಕೂಟದ ಪ್ರಚಾರ ಜನರನ್ನು ಎಚ್ಚರಿಸಿದೆ. ರಾಜ್ಯದ ಅಹಿಂದ ಮತಗಳು ಕಾಂಗ್ರೆಸ್ ಗೆ ಒಗ್ಗಟ್ಟಾಗಿ ಬಂದು ತಲುಪಿವೆ.

2019 ರಲ್ಲಿ ಆದಂತೆ ಈ ಬಾರಿ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡಿ ಹಾಗೂ ಅಸದುದ್ದೀನ್ ಉವೈಸಿ ಪಕ್ಷದ ನಡುವೆ ಮೈತ್ರಿ ಇರಲಿಲ್ಲ. 2019 ರಲ್ಲಿ ಆ ಎರಡು ಪಕ್ಷಗಳ ಮೈತ್ರಿಯಿಂದ ಮುಸ್ಲಿಂ ಮತ್ತು ದಲಿತ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಗೆ ಹಿನ್ನಡೆಯಾಗಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷವು 13 ಲೋಕಸಭಾ ಸ್ಥಾನಗಳನ್ನು ಗೆದ್ದು ಮತ್ತೆ ರಾಜ್ಯದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News