ಆರ್ಟಿಐ, ಆರ್ಟಿಇ, ನರೇಗಾ, ಅಣ್ವಸ್ತ್ರ ಒಪ್ಪಂದ... ಸಿಂಗ್ ಪರಂಪರೆಯ ಹೆಜ್ಜೆ ಗುರುತುಗಳು
ಹೊಸದಿಲ್ಲಿ: ದೇಶದ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಸುಧಾರಣೆಯ ಹರಿಕಾರ ಎಂದು ವಿಶ್ವಕ್ಕೆ ಪರಿಚಿತರಾಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು, ಹತ್ತು ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದ ಅವಧಿಯಲ್ಲಿ ಸಾಮಾಜಿಕ ವಲಯದಲ್ಲಿ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದರು. ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಸಿಂಗ್ ಅವಧಿಯ ಪ್ರಮುಖ ಹೆಜ್ಜೆಗುರುತುಗಳು ಎನಿಸಿವೆ.
ಈ ಯೋಜನೆಗಳು ಸರ್ಕಾರದ ಒಳಗಿನಿಂದ ಬಂದ ಪರಿಕಲ್ಪನೆಗಳಾಗಿರದೇ, ಸೋನಿಯಾಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯ ಶಿಫಾರಸ್ಸುಗಳಾಗಿವೆ. ಈ ಯೋಜನೆಯ ಯಶಸ್ಸಿನ ಕೀರ್ತಿಯನ್ನು ಗಾಂಧಿ ಕುಟುಂಬ ಪಡೆದಿತ್ತು. ಈ ಪ್ರಮುಖ ಯೋಜನೆಗಳಿಗೆ ಕಾಯ್ದೆಯ ಭದ್ರತೆಯನ್ನೂ ಒದಗಿಸಲಾಗಿದ್ದು, ಆರ್ಟಿಐ ಹಾಗೂ ನರೇಗಾ ಯೋಜನೆಗಳಿಗೆ ಸಂಬಂಧಿಸಿದ ಕಾಯ್ದೆಗಳು 2005ರಲ್ಲಿ ಜಾರಿಗೆ ಬಂದಿದ್ದವು.
ಡಾ.ಸಿಂಗ್ ಅವರ ಮೊದಲ ಅವಧಿಯಲ್ಲಿ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ನೀತಿಯೂ ಜಾರಿಗೆ ಬಂದಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಅರ್ಜುನ್ ಸಿಂಗ್ ಇದರ ಪ್ರತಿಪಾದಕರಾಗಿದ್ದರು. ಇದು ಜಾರಿಗೆ ಬರುವ ಮುನ್ನ ಸಂಪುಟದಲ್ಲೇ ಹಲವು ಮಂದಿ ಸಚಿವರು ಇದನ್ನು ವಿರೋಧಿಸಿದ್ದರು. ಮೊದಲ ಅವಧಿಯ ಕೊನೆಗೆ ಯುಪಿಎ ಸರ್ಕಾರ ಮೆಗಾ ಕೃಷಿ ಯೋಜನೆಗಳ ಪ್ಯಾಕೇಜ್ ಕೂಡಾ ಘೋಷಿಸಿತ್ತು. ಇವು 2009ರಲ್ಲಿ ಯುಪಿಎ ಅಧಿಕಾರಕ್ಕೆ ಮರಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವು.
ಬಳಿಕ ಆರ್ಟಿಇಗೆ ಕಾಯ್ದೆಯ ಸ್ವರೂಪ ನೀಡಿದ್ದಲ್ಲದೇ ಆಹಾರದ ಹಕ್ಕು ಅಥವಾ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿಗೂ ಕಾರಣರಾಗಿದ್ದರು. ಭೂ ಕಾಯ್ದೆಯು ಕೈಗಾರಿಕಾ ವಲಯಕ್ಕೆ ದೊಡ್ಡ ತಡೆ ಎನಿಸಿದರೂ, ಎನ್ಎಫ್ಎಸ್ಎ ಪೂರ್ಣವಾಗಿ ಅನುಷ್ಠಾನಕ್ಕೆ ಬರಲೇ ಇಲ್ಲ.