ರಾಜ್ಯಸಭೆ ಉಪ ಚುನಾವಣೆ: ಅಭಿಷೇಕ್ ಮನು ಸಿಂಘ್ವಿ ಅವಿರೋಧ ಆಯ್ಕೆ ಸಾಧ್ಯತೆ
Update: 2024-08-19 06:35 GMT
ಹೈದರಾಬಾದ್: ತೆಲಂಗಾಣದ ಪ್ರಮುಖ ವಿರೋಧ ಪಕ್ಷವಾದ ಭಾರತ ರಾಷ್ಟ್ರೀಯ ಸಮಿತಿಯು ಇದುವರೆಗೆ ರಾಜ್ಯಸಭಾ ಉಪ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಘೋಷಿಸದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದೂ, ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಬಳಿ ಭಾರಿ ಬಹುಮತವಿದ್ದು, ಈ ಉಪ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಹೀಗಿದ್ದೂ, ಭಾರತ ರಾಷ್ಟ್ರೀಯ ಸಮಿತಿಯೇನಾದರೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಸೆಪ್ಟೆಂಬರ್ 3ರಂದು ಚುನಾವಣೆ ನಡೆಯವುದು ಅನಿವಾರ್ಯವಾಗಲಿದೆ.
ಕೆ.ಕೇಶವರರಾವ್ ಅವರು ಬಿಆರ್‌ಎಸ್ ಪಕ್ಷವನ್ನು ತೊರೆದಿದ್ದರಿಂದ ರಾಜ್ಯಸಭಾ ಸ್ಥಾನ ತೆರವುಗೊಂಡಿತ್ತು. ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಯ ರಾಜ್ಯಸಭಾ ಸದಸ್ಯತ್ವದ ಅವಧಿ ಎಪ್ರಿಲ್ 9, 2026ರವರೆಗೆ ಇರಲಿದೆ.