ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷ : ಪ್ರಧಾನಿ ಮೋದಿ

Update: 2024-10-09 17:19 GMT

 ಪ್ರಧಾನಿ ನರೇಂದ್ರ ಮೋದಿ | PC : PTi

ಮುಂಬೈ : ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷ. ಹಿಂದೂಗಳನ್ನು ವಿಭಜಿಸುವ ಹಾಗೂ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟಲು ದ್ವೇಷ ಹರಡಲು ಬಯಸುವ ಕಾರ್ಖಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ಹರ್ಯಾಣ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ಒಂದು ದಿನದ ಬಳಿಕ ನರೇಂದ್ರ ಮೋದಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹರ್ಯಾಣ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಹಾಗೂ ಇದು ದೇಶ ಹೇಗೆ ಚಿಂತಿಸುತ್ತಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ ಮೋದಿ, ಮಹಾರಾಷ್ಟ್ರದಲ್ಲಿ ನಾವು ಅತಿ ದೊಡ್ಡ ಗೆಲುವು ಸಾಧಿಸಲಿದ್ದೇವೆ ಎಂದಿದ್ದಾರೆ.

ಅಧಿಕಾರ ಪಡೆಯಲು ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಪ್ರತಿಪಕ್ಷವಾದ ಮಹಾ ವಿಕಾಸ ಅಘಾಡಿ (ಎಂವಿಎ) ಬಯಸುತ್ತಿದೆ. ಆದರೆ, ಆಡಳಿತಾರೂಢ ಮಹಾಯುತಿ ಸರಕಾರ ರಾಜ್ಯವನ್ನು ಸಬಲಗೊಳಿಸುತ್ತಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ 7,600 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಆನ್‌ಲೈನ್‌ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಯೋಜನೆಗಳ ತ್ವರಿತ ಅಭಿವೃದ್ಧಿ ಈ ಹಿಂದೆ ಕಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ಇದೇ ರೀತಿಯ ವೇಗ ಹಾಗೂ ಪ್ರಮಾಣ ಕಂಡು ಬಂದಿತ್ತು ಎಂದು ಮೋದಿ ಹೇಳಿದರು.

ಬಡವರು, ರೈತರು, ಯುವಕರು ಹಾಗೂ ಮಹಿಳೆಯರ ಅಭಿವೃದ್ಧಿಯೊಂದಿಗೆ ವಿಕಸಿತ ಭಾರತ ನಮ್ಮ ಗುರಿ. ಕಾಂಗ್ರೆಸ್ ಮುಸ್ಲಿಮರಲ್ಲಿ ಭೀತಿಯನ್ನು ಸೃಷ್ಟಿಸುತ್ತಿದೆ ಹಾಗೂ ಅವರನ್ನು ಮತ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತಿದೆ ಎಂದು ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News