“ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ”:ಕಾಂಗ್ರೆಸ್ ನಾಯಕ ಆಚಾರ್ಯ ಕೃಷ್ಣನ್ ಕರೆ
ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ನೀಡಬೇಕಾದರೆ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಮನ್ ಶುಕ್ರವಾರ ಕರೆ ನೀಡಿದ್ದಾರೆ.
‘‘ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಗುರುತಿಲ್ಲ. ಇಡೀ ಪ್ರತಿಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದಲ್ಲಿ ಪ್ರಿಯಾಂಕಾಗಾಂಧಿಗಿಂತ ಹೆಚ್ಚು ಜನಪ್ರಿಯ ನಾಯಕರಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಬಲವಾದ ಸ್ಪರ್ಧೆ ನೀಡಬೇಕೆಂಬ ಬಯಕೆಯಿದ್ದರೆ, ಅದು ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು’’ ಎಂದು ಆಚಾರ್ಯ ಪ್ರಮೋದ್ ಕೃಷ್ಣನ್ ತಿಳಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಹೆಸರಿಸಬೇಕೆಂದು ಪ್ರಮೋದ್ ಕೃಷ್ಣನ್ ಕರೆ ನೀಡಿರುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ ನೀಡಿದ ಹೇಳಿಕೆಯೊದರಲ್ಲಿ ಅವರು, ಪ್ರಿಯಾಂಕಾ ಅವರಿಗಿಂತಲೂ ಮಿಗಿಲಾದ ಜನಪ್ರಿಯ, ಸ್ವೀಕಾರಾರ್ಹ ಹಾಗೂ ವಿಶ್ವಸನೀಯ ನಾಯಕರು ಮತ್ತೊಬ್ಬರಿಲ್ಲವೆಂದು ಹೇಳಿದ್ದರು.