ಈ ಹಂತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು...: ಕಾಂಗ್ರೆಸ್ ಹೇಳಿದ್ದೇನು?

Update: 2023-07-02 18:25 GMT

ಫೋಟೋ: PTI

ಹೊಸದಿಲ್ಲಿ,ಜು.2: ಈ ಹಂತದಲ್ಲಿ ಸಮಾನನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಅನಪೇಕ್ಷಣೀಯವೆಂದು ತನ್ನ ನಿಲುವಿಗೆ ತಾನು ಬದ್ಧನಾಗಿರುವುದಾಗಿ ಕಾಂಗ್ರೆಸ್ ಹೇಳಿದೆ. ಒಂದು ವೇಳೆ ಸಮಾನನಾಗರಿಕ ಸಂಹಿತೆಯ ವಿಧೇಯಕದ ಕರಡು ಪ್ರಕಟವಾದಲ್ಲಿ ಅಥವಾ ಈ ವಿಷಯದ ಕುರಿತ ವರದಿಯು ಬಹಿರಂಗಗೊಂಡಲ್ಲಿ ತಾನು ಮುಂದಿನ ಪ್ರತಿಕ್ರಿಯೆ ನೀಡುವುದಾಗಿ ಅದು ಹೇಳಿದೆ.

ಕಾಂಗ್ರೆಸ್ ನ ಸಂಸದೀಯ ಕಾರ್ಯತಂತ್ರ ಸಮಿತಿಯು ಶನಿವಾರ ಸಭೆ ನಡೆಸಿ ಸಮಾನನಾಗರಿಕ ಸಂಹಿತೆ ಸೇರಿದಂತೆ ಜುಲೈ 20ರಂದು ಆರಂಭಗೊಳ್ಳಲಿರುವ ಸಂಸತ್ನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ತಾನು ಪ್ರಸ್ತಾವಿಸಬೇಕಾದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿತು.

ಮಣಿಪುರ ಹಿಂಸಾಚಾರ,ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ನ ನಿರ್ಗಮನ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ, ಹಣದುಬ್ಬರ, ನಿರುದ್ಯೋಗ ಹೆಚ್ಚಳ ಹಾಗೂ ರಾಜ್ಯ ಸರಕಾರಗಳ ಜೊತೆ ರಾಜ್ಯಪಾಲರುಗಳು ನಡವಳಿಕೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಕೇಂದ್ರ ಸರಕಾರವನ್ನು ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಂಸದೀಯ ಕಾರ್ಯಸಮಿತಿ ಸಭೆಯ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಮಾನನಾಗರಿಕ ಸಂಹಿತೆಗೆ ಸಂಬಂಧಿಸಿ ಕಾಂಗ್ರೆಸ್ ಈಗಾಗಲೇ ಜೂ.15ರಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.

‘‘ ಸಮಾನನಾಗರಿಕ ಸಂಹಿತೆಯ ಕರಡು ಸಿದ್ಧಗೊಂಡಾಗ ಹಾಗೂ ಅದನ್ನು ಚರ್ಚೆಗೆ ಇರಿಸಿದಾಗ ನಾವು ಅದರಲ್ಲಿ ಪಾಲ್ಗೊಳ್ಳಲಿದ್ದೇವೆ . ಸದ್ಯದ ಮಟ್ಟಿಗೆ ಸಮಾನನಾಗರಿಕ ಸಂಹಿತೆಯ ಕುರಿತ ಪ್ರತಿಕ್ರಿಯೆಗಾಗಿ ಕಾನೂನು ಆಯೋಗವು ಸಾರ್ವಜನಿಕ ನೋಟಿಸ್ ನೀಡಿದೆ. ಆದರೆ ಈ ವಿಷಯವಾಗಿ ಹೆಚ್ಚಿನ ಬೆಳವಣಿಗೆಯೇನೂ ನಡೆದಿಲ್ಲ’’ ಎಂದವರು ಹೇಳಿದರು.

ದಿಲ್ಲಿಯ ಸುಗ್ರೀವಾಜ್ಞೆ ವಿರುದ್ಧ ಆಪ್ಸರಕಾರವು ಪ್ರತಿಪಕ್ಷಗಳ ಬೆಂಬಲ ಯಾಚಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್, ಸದನದಲ್ಲಿ ಈ ಕುರಿತ ನೂತನ ವಿಧೇಯಕ ಮಂಡನೆಯಾದಾಗ ಕಾಂಗ್ರೆಸ್ ಆ ಬಗ್ಗೆ ಗಮನರಿಸಲಿದೆಯೆಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News