ಶಿಂಧೆ, ಅಜಿತ್ ಪವಾರ್ ಗೆ ಕಾಂಗ್ರೆಸ್ ಮೈತ್ರಿಯ ಆಹ್ವಾನ; ಸರಕಾರ ರಚಿಸಿದಲ್ಲಿ ಸಿಎಂ ಸ್ಥಾನದ ಆಫರ್!

Update: 2025-03-14 20:31 IST
ಶಿಂಧೆ, ಅಜಿತ್ ಪವಾರ್ ಗೆ ಕಾಂಗ್ರೆಸ್ ಮೈತ್ರಿಯ ಆಹ್ವಾನ; ಸರಕಾರ ರಚಿಸಿದಲ್ಲಿ ಸಿಎಂ ಸ್ಥಾನದ ಆಫರ್!

ಏಕನಾಥ ಶಿಂಧೆ - ಅಜಿತ್ ಪವಾರ್ | Photo - PTI

  • whatsapp icon

ಹೊಸದಿಲ್ಲಿ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಶುಕ್ರವಾರ ಎನ್ಸಿಪಿ ವರಿಷ್ಠ ಅಜಿತ್ ಪವಾರ್ ಹಾಗೂ ಶಿವಸೇನಾ ಅಧ್ಯಕ್ಷ ಏಕನಾಥ ಶಿಂಧೆ ಅವರಿಗೆ ಬಹಿರಂಗ ಆಹ್ವಾನ ನೀಡಿದೆ ಹಾಗೂ ಅವರಿಗೆ ತಾನು ಸರಕಾರ ರಚಿಸಿದಲ್ಲಿ ಮುಖ್ಯಮಂತ್ರಿ ಸ್ಥಾನದ ಕೊಡುಗೆಯನ್ನು ಕೂಡಾ ನೀಡಿದೆ.

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಶಾಸಕ ನಾನಾ ಪಟೋಲೆ ಅವರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಈ ಆಹ್ವಾನ ನೀಡಿದ್ದಾರೆ. ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆ ಅವರ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ತಮ್ಮ ಪಕ್ಷವು ಬದುಕುಳಿಯುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಉಭಯ ನಾಯಕರೂ ಭೀತಿಗೊಂಡಿದ್ದಾರೆ. ಬಿಜೆಪಿಯು ಅವರನ್ನು ರಾಜಕೀಯವಾಗಿ ಬದುಕಲು ಬಿಡುವುದಿಲ್ಲ.ಇದು ಬಿಜೆಪಿಯ ಮಾಮೂಲಿ ಅಭ್ಯಾಸವಾಗಿದೆ. ಅದು ತನ್ನ ಮಿತ್ರನ್ನು ಮುಗಿಸಿಬಿಡುತ್ತದೆ. ಶಿಂಧೆಯವರ ಶಿವಸೇನಾವನ್ನು ಬಿಜೆಪಿ ಹಳಿತಪ್ಪಿಸಿದೆ. ಹೀಗಾಗಿ ಪವಾರ್ ಹಾಗೂ ಶಿಂಧೆ ತುಂಬಾ ಎಚ್ಚರಿಕೆ ವಹಿಸಬೇಕು. ಕಾಂಗ್ರೆಸ್ ಪಕ್ಷವು ಈ ಇಬ್ಬರೂ ನಾಯಕರೊಂದಿಗೆ ಇರುತ್ತದೆ ಎಂದರು.

ಈ ಇಬ್ಬರೂ ನಾಯಕರು ಮುಖ್ಯಮಂತ್ರಿಗಳಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಎಂದು ಪಟೋಲೆ ಹೇಳಿದರು. ‘‘ನಾವು ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆ ಅವರ ಜೊತೆಗಿದ್ದೇವೆ. ನಾವು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಅವರಿಬ್ಬರ ಕ್ಷೇಮವನ್ನು ನಾವು ನೋಡಿಕೊಳ್ಳುತ್ತೇವೆ. ಕೆಲವು ಸಮಯದವರೆಗೆ ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಇನ್ನು ಕೆಲವು ಸಮಯದವರೆಗೆ ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಿದ್ದೇವೆ ’’ ಎಂದವರು ಹೇಳಿದರು.

ಆದರೆ ಪಟೋಲೆ ಅವರ ಹೇಳಿಕೆಗೆ ಈ ಇಬ್ಬರು ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಳಿಕ ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದಕ್ಕಾಗಿ ಶಿಂಧೆ ಅವರು ಬಿಜೆಪಿ ವಿರುದ್ಧ ಮುನಿಸು ಹೊಂದಿದ್ದರೆ ಎಂಬ ಊಹಾಪೋಹಗಳ ನಡುವೆ ಅವರಿಗೆ ಪಟೋಲೆ ನೀಡಿರುವ ಆಹ್ವಾನವು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಿಂಧೆ ಹಾಗೂ ಅಜಿತ್ ಪವಾರ್ಗೆ ಪಟೋಲೆ ನೀಡಿರುವ ಆಹ್ವಾನಕ್ಕೆ ಬಿಜೆಪಿಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಟೋಲೆ ಅವರ ಕೊಡುಗೆ ಅಸಂಬದ್ಧವೆಂದು ಪಕ್ಷೇತರ ಶಾಸಕ ಬಚ್ಚುಕಾಡು ಹೇಳಿದ್ದಾರೆ. ‘‘ ಕಾಂಗ್ರೆಸ್ ಪಕ್ಷವೇನು ಸ್ಥಿರವಾಗಿದೆಯೇ? ಹಿರಿಯ ನಾಯಕ ರವೀಂದ್ರ ಧಾಂಗೆಕರ್ ಅವರು ಇತ್ತೀಚೆಗಷ್ಟೇ ಶಿವಸೇನಾ ಶಿಂಧೆ ಬಣವನ್ನು ಸೇರಿದ್ದಾರೆ. ಬಿಜೆಪಿ ಸರಕಾರವು ಕೇಂದ್ರದಲ್ಲಿ ಇರುವವರೆಗೆ ಯಾವ ನಾಯಕರೂ ಎಲ್ಲಿಗೂ ಹೋಗುವುದಿಲ್ಲ. ಎಲ್ಲರೂ ಜಾರಿ ನಿರ್ದೇಶನಾಲಯದ ಸಚೇತಾಕಾಜ್ಞೆಯ ಬಗ್ಗೆ ಭೀತಿ ಹೊಂದಿದ್ದಾರೆ’’ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News