ಸ್ವಾತಂತ್ರ್ಯ ಹೋರಾಟಕ್ಕೆ ಉತ್ತರಾಖಂಡದ ಮಹಿಳೆಯರ ಕೊಡುಗೆ ಅಪಾರ: ಮುರ್ಮು
ಡೆಹ್ರಾಡೂನ್ : ಉತ್ತರಾಖಂಡದ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿದ್ದು ಇಡೀ ದೇಶಕ್ಕೆ ಕೀರ್ತಿ ತಂದವರಾಗಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಹೇಳಿದ್ದಾರೆ.
ಉತ್ತರಾಖಂಡ ಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದಿವಂಗತ ಸುಶೀಲಾ ಬಲುಂಜಿ ಉತ್ತರಾಖಂಡದ ಪ್ರತ್ಯೇಕ ಅಸ್ವಿತ್ವಕ್ಕಾಗಿ ಹೋರಾಡಿದರು. ಅವರನ್ನು ಉತ್ತರಾಖಂಡ ಮಾತ್ರವಲ್ಲ, ಇಡೀ ದೇಶದ ಜನರು ಮಹಿಳೆಯ ಶಕ್ತಿಯ ಪ್ರತೀಕವಾಗಿ ಗುರುತಿಸುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.
‘‘ಸುಶೀಲಾ ಬಲುಂಜಿಯವರ ಧೈರ್ಯವು ಭಾರತೀಯ ಮಹಿಳೆಯರ ಧೈರ್ಯದ ಭವ್ಯ ಪರಂಪರೆಗೆ ಅನುಗುಣವಾಗಿಯೇ ಇದೆ. ಇನ್ನೋರ್ವ ಮಹಿಳೆ ಬಿಶ್ಣಿ ದೇವಿ ಶಾ ಸ್ವಾತಂತ್ರ್ಯ ಹೋರಾಟದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬಚೇಂದ್ರಿ ಪಾಲ್ ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ಮಹಿಳೆಯಾದರು. ಗೌರಾ ದೇವಿ ಮರಗಳನ್ನು ರಕ್ಷಿಸಲು ಯುದ್ಧೋಪಾದಿಯಲ್ಲಿ ಹೋರಾಡಿದರು. ಅವರೆಲ್ಲರೂ ಇಡೀ ದೇಶಕ್ಕೆ ಆದರ್ಶಪ್ರಾಯರಾಗಿದ್ದಾರೆ’’ ಎಂದು ರಾಷ್ಟ್ರಪತಿ ಹೇಳಿದರು.
‘‘ಇತ್ತೀಚೆಗೆ ಉತ್ತರಾಖಂಡದ ಮಗಳು ವಂದನಾ ಕಟಾರಿಯ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇಂಥ ಮಹಿಳೆಯರು ಉತ್ತರಾಖಂಡದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ನಾರಿ ಶಕ್ತಿ ವಂದನಾ ಕಾಯ್ದೆ 2023ಕ್ಕೆ ಅಂಕಿತ ಹಾಕಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಅದು ರಾಷ್ಟ್ರ ನಿರ್ಮಾಣದಲ್ಲಿ ಉನ್ನತ ಮಟ್ಟದ ಕೊಡುಗೆ ನೀಡಲು ದೇಶದ ಸಹೋದರಿಯರು ಮತ್ತು ಪುತ್ರಿಯರಿಗೆ ಪ್ರೇರಣೆ ನೀಡುತ್ತದೆ’’ ಎಂದು ದ್ರೌಪದಿ ಮುರ್ಮು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ‘‘ಮಹಿಳಾ ನೀತಿ’’ಯೊಂದನ್ನು ರೂಪಿಸಲಾಗಿದೆ ಎಂದು ಘೋಷಿಸಿದರು.
‘‘ರಾಜ್ಯದ ನಿರ್ಮಾಣದಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಹಾಗೂ ಅವರು ರಾಜ್ಯದ ಬೆನ್ನೆಲುಬು ಆಗಿದ್ದಾರೆ. ಅವರ ಅಭಿವೃದ್ಧಿಗಾಗಿ ಮಹಿಳಾ ನೀತಿಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು’’ ಎಂಬ ಭರವಸೆಯನ್ನು ಅವರು ನೀಡಿದರು.
ಅದೇ ವೇಳೆ, ಅಗತ್ಯ ಉಳ್ಳ ಕುಟುಂಬಗಳಿಗೆ ನೆರವು ನೀಡುವುದಕ್ಕಾಗಿ ‘‘ಮುಖ್ಯಮಂತ್ರಿ ಕನ್ಯಾ ಸಾಮೂಹಿಕ ವಿವಾಹ’’ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸುವ ಭರವಸೆಯನ್ನು ಅವರು ನೀಡಿದರು.
ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಉಪಸ್ಥಿತರಿದ್ದರು.