ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆ | ನಯನತಾರಾ ವಿರುದ್ಧ ಮೊಕದ್ದಮೆ ಹೂಡಿದ ಧನುಷ್

Update: 2024-11-27 14:35 GMT

ನಯನತಾರ , ನಟ ಧನುಷ್ | PC : X 

ಚೆನ್ನೈ : ನೆಟ್ಫ್ಲಿಕ್ಸ್ ನಲ್ಲಿ ಇತ್ತೀಚಿಗೆ ಬಿಡುಗಡೆಯಾದ ಡಾಕ್ಯುಮೆಂಟರಿ ʼNayanthara: Beyond the Fairytaleʼ ನಲ್ಲಿ ಬಳಸಲಾದ ಕೆಲವು ದೃಶ್ಯಗಳಿಗೆ ಸಂಬಂಧಿಸಿದಂತೆ ನಟ ಧನುಷ್ ಅವರು ನಯನತಾರ ಮತ್ತು ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಧನುಷ್ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಂಡರ್ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ನವೆಂಬರ್ 27 ರ ಬುಧವಾರ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಟಾರ್ಕ್ ಸ್ಟುಡಿಯೋಸ್ ಎಲ್ಎಲ್ಪಿ (ನೆಟ್ಫ್ಲಿಕ್ಸ್ ಸಹಯೋಗದೊಂದಿಗೆ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ), ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ನಯನತಾರಾ, ವಿಘ್ನೇಶ್ ಶಿವನ್ ಮತ್ತು ಭಾರತದಲ್ಲಿ ನೆಟ್ಫ್ಲಿಕ್ಸ್ನ ಹೂಡಿಕೆಗಳನ್ನು ನಿರ್ವಹಿಸುವ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಎಲ್ಎಲ್ಪಿ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಈ ಪ್ರಕರಣವು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ಮುಂದೆ ವಿಚಾರಣೆಗೆ ಬಂದಿತು. ಲಾಸ್ ಗಟೋಸ್ ಮಹಾರಾಷ್ಟ್ರದ ಮುಂಬೈನಿಂದ ಹೊರಗಿರುವುದರಿಂದ, ವಂಡರ್ಬಾರ್ ಫಿಲ್ಮ್ಸ್ ಮದ್ರಾಸ್ ಹೈಕೋರ್ಟ್ನ ವ್ಯಾಪ್ತಿಯೊಳಗೆ ಕಂಪೆನಿಯ ವಿರುದ್ಧ ಮೊಕದ್ದಮೆ ಹೂಡಲು ನ್ಯಾಯಾಲಯದ ಅನುಮತಿಯನ್ನು ಕೋರಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ʼನಾನುಮ್ ರೌಡಿ ಧಾನ್ʼ ಸೆಟ್ನಲ್ಲಿ ತೆಗೆದ ಬಿಹೈಂಡ್ ದಿ ಸೀನ್ಸ್ (ತೆರೆಯ ಹಿಂದಿನ ದೃಶ್ಯ) ದೃಶ್ಯಗಳ ಬಳಕೆಯ ಬಗ್ಗೆ ಧನುಷ್ ಆಕ್ಷೇಪವೆತ್ತಿದ್ದಾರೆ. ಈ ಚಿತ್ರವನ್ನು ಧನುಷ್ ಅವರ ವಂಡರ್ ಬಾರ್ ಫಿಲ್ಮ್ಸ್ ನಿರ್ಮಿಸಿದೆ. ನಯನತಾರಾ ಮತ್ತು ವಿಜಯ್ ಸೇತುಪತಿ ನಟಿಸಿದ್ದಾರೆ. ಈ ಚಿತ್ರವನ್ನು ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ಚಿತ್ರದ ಸೆಟ್ ನಲ್ಲಿ ಮೊದಲಬಾರಿಗೆ ಭೇಟಿಯಾಗಿದ್ದರು. ನಯನತಾರಾ ಕುರಿತ ಈ ಡಾಕ್ಯುಮೆಂಟರಿಯು ನೆಟ್ಫ್ಲಿಕ್ಸ್ ನಲ್ಲಿ ಪ್ರಮುಖವಾಗಿ ಗಮನಸೆಳೆದಿದೆ.

ನೆಟ್ಫ್ಲಿಕ್ಸ್ನಲ್ಲಿ ಡಾಕ್ಯುಮೆಂಟರಿ ಬಿಡುಗಡೆಯಾಗುವ ಎರಡು ದಿನಗಳ ಮೊದಲು, ನವೆಂಬರ್ 16 ರಂದು ನಯನತಾರಾ ಧನುಷ್ ಅವರು ತನಗೆ ನೋಟಿಸ್ ನೀಡಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಧನುಷ್ ತನ್ನ ಮತ್ತು ಪತಿ ವಿಘ್ನೇಶ್ ಶಿವನ್ ಮತ್ತು ಚಲನಚಿತ್ರದ ವಿರುದ್ಧ ಕಳೆದ ಒಂದು ದಶಕದಿಂದ ಸೇಡು ತೀರಿಸಿಕೊಂಡಿದ್ದಾರೆ ಎಂದು ಬಹಿರಂಗ ಪತ್ರದಲ್ಲಿ ಅವರು ಆರೋಪಿಸಿದ್ದರು.

ಅಭಿಮಾನಿಗಳು ನೋಡಿದ ಧನುಷ್ ಬೇರೆ ಅಸಲಿ ಧನುಷ್ ಬೇರೆಯೇ. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದ ನಯನತಾರಾ, “ಸೆಟ್ನಲ್ಲಿರುವ ಎಲ್ಲಾ ವ್ಯಕ್ತಿಗಳ ಜೀವನ ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸುವ ಮೂಲಕ ಅವರು ಚಕ್ರವರ್ತಿಯಾಗುತ್ತಾರೆಯೇ" ಎಂದು ಪ್ರಶ್ನಿಸಿದ್ದರು.

ತನ್ನ ಡಾಕ್ಯಮೆಂಟರಿಯಲ್ಲಿ ಚಿತ್ರದ ಸಂಗೀತ ಅಥವಾ ಛಾಯಾಚಿತ್ರಗಳನ್ನು ಬಳಸಲು ಧನುಷ್ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡಲು ನಿರಾಕರಿಸಿದರು ಎಂದು ನಯನತಾರಾ ಆರೋಪಿಸಿದ್ದರು. 3 ಸೆಕೆಂಡ್ಗಳ ಬಿಹೈಂಡ್ ದಿ ಸೀನ್ಸ್ (ತೆರೆಯ ಹಿಂದಿನ ದೃಶ್ಯ) ದೃಶ್ಯವನ್ನು ಬಳಸಿದ್ದಕ್ಕಾಗಿ ಧನುಷ್ 10 ಕೋಟಿ ರೂಪಾಯಿಗಳನ್ನು ನೀಡುವಂತೆ ತನಗೆ ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ನಯನತಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News