ಕೋವಿಶೀಲ್ಡ್ ಅಡ್ಡಪರಿಣಾಮಗಳು: ಎಲ್ಲಾ ಕೋವಿಡ್‌ ಲಸಿಕೆಗಳ ಪರಿಶೀಲನೆಗೆ ವೈದ್ಯರ ತಂಡದಿಂದ ಆಗ್ರಹ

Update: 2024-05-10 07:11 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಫಾರ್ಮಾ ಕಂಪನಿ ಆಸ್ಟ್ರಝೆನೆಕ ತನ್ನ ಕೋವಿಡ್‌ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ದೇಶದ ವೈದ್ಯರ ಒಂದು ಗುಂಪು ಭಾರತದ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿದ ಕೋವಿಶೀಲ್ಡ್‌ ಲಸಿಕೆಯ ಸುರಕ್ಷತತೆಯ ಬಗ್ಗೆ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅವೇಕನ್‌ ಇಂಡಿಯಾ ಮೂವ್‌ಮೆಂಟ್‌ ಎಂಬ ಸಂಸ್ಥೆಯ ಅಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು ಎಲ್ಲಾ ಕೋವಿಡ್‌ ಲಸಿಕೆಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಬೇಕು, ಸಕ್ರಿಯ ಸರ್ವೇಕ್ಷಣೆ ನಡೆಸಬೇಕು ಹಾಗೂ ಲಸಿಕೆಯ ಅಡ್ಡ ಪರಿಣಾಮಗಳು ಆದಷ್ಟು ಬೇಗ ಪತ್ತೆಯಾಗುವ ನಿಟ್ಟಿನಲ್ಲಿ ಒಂದು ವ್ಯವಸ್ಥೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.

“ಕೋವಿಡ್‌ ಲಸಿಕೆ ಪಡೆದ ನಂತರ ಸಂಭವಿಸಿದ ಅನೇಕ ಸಾವುಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಹಾಗೂ ಈ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಯಾವುದೇ ವೈಜ್ಞಾನಿಕ ಪರಿಶೀಲನೆಯಿಲ್ಲದೆ ವಾದಿಸಿದೆ,” ಎಂದು ಹೋರಾಟಗಾರ ಮತ್ತು ರೇಡಿಯಾಲಜಿಸ್ಟ್‌ ಡಾ ತರುಣ್‌ ಕೊಠಾರಿ ಹೇಳಿದ್ದಾರೆ.

ಕೋವಿಡ್‌ ಲಸಿಕೆಯ ಅಡ್ಡಪರಿಣಾಮಗಳಾದ ಥ್ರೊಂಬೋಸಿಸ್‌ ಮತ್ತು ಥ್ರೊಂಬೊಸೈಟೋಪೇನಿಯಾ ಸಿಂಡ್ರೋಮ್‌ ಬಗ್ಗೆ ಜಗತ್ತ ಈಗ ತಿಳಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅವೇಕನ್‌ ಇಂಡಿಯಾ ಮೂವ್‌ಮೆಂಟ್‌ ಕೋವಿಡ್‌ ಲಸಿಕೆ ಪಡೆದ ನಂತರ ಅದರ ಅಡ್ಡ ಪರಿಣಾಮಗಳಿಂದ ಉಂಟಾದ ಸಾವುಗಳ ಕುರಿತು ಮಾದ್ಯಮ/ಸಾಮಾಜಿಕ ಜಾಲತಾಣದಿಂದ ದೊರೆತ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಿತ ಪ್ರಾಧಿಕಾರಗಳಿಗೆ ನೀಡುತ್ತಿದೆ ಎಂದು ಡಾ ಕೊಠಾರಿ ಹೇಳಿದರು.

ಈ ಲಸಿಕೆಗಳ ಸಂಭಾವ್ಯ ಅಲ್ಪಕಾಲೀನ ಅಥವಾ ದೀರ್ಘಕಾಲೀನ ಅಡ್ಡಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಡೇಟಾ ಇಲ್ಲದೆಯೇ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗಿತ್ತು ಎಂದು ಸ್ತ್ರೀರೋಗ ತಜ್ಞೆ ಮತ್ತು ಕ್ಯಾನ್ಸರ್‌ ತಜ್ಞೆ ಡಾ ಸುಜಾತಾ ಮಿತ್ತಲ್‌ ಹೇಳಿದ್ದಾರೆ.

ಕೋವಿಡ್‌ ಲಸಿಕೆಗಳಿಂದ ಬಾಧಿತರಾದವರಿಗೆ ಪರಿಹಾರ ಒದಗಿಸಬೇಕೆಂದು ಸಂಸ್ಥೆ ಆಗ್ರಹಿಸಿದೆ.

ತನ್ನ ಕೋವಿಡ್‌ ಲಸಿಕೆಗಳಿಂದ ಅಪರೂಪದಲ್ಲಿ ಅಡ್ಡ ಪರಿಣಾಮಗಳುಂಟಾಗುತ್ತದೆ ಎಂದು ಇತ್ತೀಚೆಗೆ ಆಸ್ಟ್ರಝೆನೆಕ ಒಪ್ಪಿಕೊಂಡಿದ್ದ ಬೆನ್ನಲ್ಲೇ ಅದು ಲಸಿಕೆಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಿ ಅವುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ಕುರಿತು ಪ್ರಕಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News