ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಟೀಮ್ ಇಂಡಿಯಾ ನೂತನ ಕೋಚ್?
ಮುಂಬೈ : ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ರಾಹುಲ್ ದ್ರಾವಿಡ್ ರ ಸ್ಥಾನವನ್ನು ವಹಿಸಿಕೊಳ್ಳುವ ಬಗ್ಗೆ ಚರ್ಚಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ರನ್ನು ಭೇಟಿ ಮಾಡಿರುವ ಬಗ್ಗೆ ಊಹಾಪೋಹಗಳು ಹಬ್ಬಿವೆ.
ಫ್ಲೆಮಿಂಗ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)ನ ಪ್ರಧಾನ ಕೋಚ್ ಆಗಿದ್ದಾರೆ. ಅವರ ಅವಧಿಯಲ್ಲಿ ತಂಡವು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ.
ಅವರ ಜನರನ್ನು ನಿಭಾಯಿಸುವ ನೈಪುಣ್ಯ ಮತ್ತು ಅವರ ಇತಿಹಾಸದ ಆಧಾರದಲ್ಲಿ, ಅವರು ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ‘‘ಸೂಕ್ತ ವ್ಯಕ್ತಿ’’ ಎಂಬುದಾಗಿ ಬಿಸಿಸಿಐ ಪರಿಗಣಿಸಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಆದರೆ, ಇಂಥ ಊಹಾಪೋಹಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರಾಕರಿಸಿದೆ. ಈ ವಿಷಯದಲ್ಲಿ, ಫ್ಲೆಮಿಂಗ್ ಮತ್ತು ತಂಡದ ನಡುವೆ ಯಾವುದೇ ಮಾತುಕತೆ ಆಗಿಲ್ಲ ಎಂದು ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
‘‘ಇಂಥ ಸುದ್ದಿಯನ್ನು ನಾನು ಕೇಳಿಲ್ಲ. ಈ ಬಗ್ಗೆ ಸ್ಟೀಫನ್ ಫ್ಲೆಮಿಂಗ್ ಸಿಎಸ್ಕೆಗೆ ಯಾವುದೇ ಮಾಹಿತಿಯನ್ನು ಈವರೆಗೆ ನೀಡಿಲ್ಲ’’ ಎಂದು ಅವರು ‘ಸ್ಪೋರ್ಟ್ಸ್ ನೌ’ನೊಂದಿಗೆ ಮಾತನಾಡಿದ ಅವರು ಹೇಳಿದರು.
ಫ್ಲೆಮಿಂಗ್ ಅಲ್ಲದೆ, ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ವಿ.ವಿ.ಎಸ್. ಲಕ್ಷ್ಮಣ್, ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ರ ಹೆಸರುಗಳೂ ಪರಿಶೀಲನೆಯಲ್ಲಿವೆ ಎಂದು ಹೇಳಲಾಗಿದೆ.