ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಅಬ್ಬರ: ಐವರು ಮೃತ್ಯು, 300 ಮಂದಿಗೆ ಗಾಯ

Update: 2024-04-01 07:01 GMT

Photo : NDTV 

ಕೋಲ್ಕತ್ತಾ: ರವಿವಾರ ಪಶ್ಚಿಮ ಬಂಗಾಳದ ಜಲ್ಪಾಯಿಗುರಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ಐವರು ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಗಿದ್ದರಿಂದ 800ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಹಲವಾರು ಮರಗಳು ಬುಡಮೇಲಾಗಿವೆ. ಬಿರುಗಾಳಿಯ ತೀವ್ರತೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ನೆರೆಯ ಮೈನಾಗುರಿಯ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಯಿತು.

ಸುದ್ದಿ ತಿಳಿಯುತ್ತಿದ್ದಂತೆಯೆ ರವಿವಾರ ರಾತ್ರಿ ಜಲ್ಪಾಯಿಗುರಿಗೆ ತಲುಪಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಲ್ಪಾಯಿಗುರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿದರು. ಅವರು ಪರಿಸ್ಥಿತಿಯ ಅವಲೋಕನವನ್ನು ನಡೆಸಿದರಲ್ಲದೆ, ಸಂತ್ರಸ್ತರ ಕುಟುಂಬದ ಸದಸ್ಯರನ್ನೂ ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳಿದರು. ರಾಜ್ಯ ಸರಕಾರವು ತೊಂದರೆಗೀಡಾಗಿರುವ ಜನರ ಜೊತೆಗೆ ನಿಲ್ಲಲಿದ್ದು, ಏನೆಲ್ಲ ನೆರವು ನೀಡಲು ಸಾಧ್ಯವೊ ಅದೆಲ್ಲ ನೆರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಕೂಡಾ ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಕಾರ್ಯಕರ್ತರು ತೊಂದರೆಗೀಡಾಗಿರುವ ಜನರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದು, ಅಧಿಕಾರಿಗಳು ಸೂಕ್ತ ನೆರವು ನೀಡುವುದನ್ನು ಖಾತ್ರಿಗೊಳಿಸಬೇಕು ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News